ಶಾಸಕರ ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು. ಸತ್ಯಾಂಶ ಹೊರಬರಬೇಕು, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ವಿನಾ ಕಾರಣ ಕಾಂಗ್ರೆಸ್ ಪಕ್ಷ ಮತ್ತು ತನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ, ಇದು ಖಂಡನೀಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು. ಬಂದ್ ವೇಳೆ ತಾನು ಬಲಾತ್ಕಾರವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾಗಿ ತನ್ನ ವಿರುದ್ದ ದೂರಲಾಗಿದ್ದು, ಅದರ ಸತ್ಯಾಸತ್ಯತೆ ಅರಿಯಬೇಕು, ಸುಳ್ಳು ಹೇಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈ ಒ್ತತ್ತಾಯಿಸಿದರು.
ನಾನೆಂದೂ ಅಂಗಡಿ, ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿಲ್ಲ. ಎಲ್ಲಿಯೂ ಅನುಚಿತವಾಗಿ ವರ್ತಿಸಿಲ್ಲ. ಬಂದ್ ಕರೆ ಕೊಟ್ಟ ಮೇಲೆ ಅಂಗಡಿ ಮುಚ್ಚಲು ವಿನಂತಿ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಮ್ಮ ಕರ್ತವ್ಯ. ನಾವು ಕೈಮುಗಿದು ಅಂಗಡಿಗಳನ್ನು ಬಂದ್ ಮಾಡಲು ವಿನಂತಿಸಿದ್ದೇವೆಯೇ ವಿನಃ ಯಾವ ಬಲವಂತವನ್ನೂ ಮಾಡಿಲ್ಲ. ಈ ಆರೋಪಗಳನ್ನು ಮಾಡುವ ಮೂಲಕ ತನ್ನನ್ನು ಕೆಟ್ಟವನನ್ನಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತವೆ ಎಂದರು.
ಭಾರತ್ ಬಂದ್ ಸ್ವಯಂಪ್ರೇರಿತವಾಗಿ ನಡೆದಿದೆ. ಕಾಂಗ್ರೆಸ್ ಬಂದ್ ಗೆ ಅನಿವಾರ್ಯವಾಗಿ ಕರೆ ಕೊಟ್ಡಿದೆ. ಪೆಟ್ರೋಲ್ ದರ ಈಗಲೂ ಜಾಸ್ತಿ ಆಗುತ್ತಿದೆ. ಸಜೀವ ಸರಕಾರ ನಿಯಂತ್ರಣ ಮಾಡಬೇಕು. ಕೇಂದ್ರ ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ರೈ ದೂರಿದರು.
ಗ್ಯಾಸ್ ಬೆಲೆ ಏರಿಕೆಯಾಗಿದ್ದಾಗ ಬಿಜೆಪಿ ಪ್ರತಿಭಟನೆ ಮಾಡಿತ್ತು. ಬಿಎಸ್.ವೈ ಸರಕಾರ ಇದ್ದಾಗ ಸೆಸ್ ಕಡಿಮೆ ಮಾಡಿಲ್ಲ. ರಾಜ್ಯ ಸರಕಾರವೂ ಸೆಸ್ ಕಡಿಮೆ ಮಾಡಬೇಕು ಎಂದು ಜವಾಬ್ದಾರಿಯಿಂದ ಬಿಜೆಪಿ ನುಣುಚಿಕೊಳ್ಳಿತ್ತಿದೆ. ಅತ್ಯಂತ ಜಾಸ್ತಿ ಬಂದ್ ಮಾಡಿಸಿದ ಪಕ್ಷ ಬಿಜೆಪಿ. ಹಿಂದೆ ಆ ಪಕ್ಷ ಬಂದ್ ಗೆ ಕರೆ ನೀಡಿದ್ದ ಸಂದರ್ಭ ಮರಗಳನ್ನು ಕಡಿದು ರಸ್ತೆಗೆ ಹಾಕಿದ್ದ ಉದಾಹರಣೆ ಇದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪುರಸಭೆ ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ ಮೊದಲಾದವರಿದ್ದರು.