Editor: Harish Mambady
ಸರಕಾರದ ಸವಲತ್ತುಗಳನ್ನು ಜನರಿಗೆ ಒದಗಿಸಲು ಪ್ರತಿನಿಧಿಯಾಗಿ ತಾನು ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ ಜನರು ಯಾವುದೇ ಕೆಲಸಗಳಿಗೆ ಮಧ್ಯವರ್ತಿಗಳಿಲ್ಲದೆ ನೇರವಾಗಿ ತನ್ನನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟು ಪ್ರಕೃತಿ ವಿಕೋಪ ಪರಿಹಾರ ಹಾಗೂ ರಾಷ್ಟ್ರೀಯ ಕುಟುಂಬ ಸಹಾಯಧನ , ಅಂತ್ಯಸಂಸ್ಕಾರ ನಿಧಿ ಸೇರಿ ಒಟ್ಟು 18 ಲಕ್ಷ ರೂ ಮೊತ್ತದ ಚೆಕ್ ಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಯು. ಶುಕ್ರವಾರ ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ, ಸರಕಾರದ ಸವಲತ್ತುಗಳನ್ನು ಕ್ಷೇತ್ರದ ಜನರಿಗೆ ನೇರವಾಗಿ ತಲುಪಿಸಲು ಪ್ರಮಾಣಿಕ ಪ್ರಯತ್ನಿಸುತ್ತೇನೆ. ಪ್ರಾಕ್ರತಿಕ ವಿಕೋಪ ದಡಿಯಲ್ಲಿ ನಷ್ಟು ಅನುಭವಿಸಿದ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಪರಿಹಾರಧನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಕ್ಷೇತ್ರದ ಜನರು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳಲು ಯಾರ ಮಧ್ಯವರ್ತಿಗಳ ಸಹಾಯ ಪಡೆಯದೆ ಕಾರ್ಯಾಲಯದಲ್ಲಿ ನೇರವಾಗಿ ತನ್ನನ್ನು ಸಂಪರ್ಕಿಸಬಹುದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿ, ಸರಕಾರದ ಸವಲತ್ತುಗಳನ್ನು ಜನರಿಗೆ ಸಕಾಲದಲ್ಲಿ ತಲುಪುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರೊಂದಿಗೆ ಅಧಿಕಾರಿಗಳು ಸ್ಪಂದಿಸಿರುವುದು ಅಭಿನಂದನೀಯ ಎಂದರು. ಸರಕಾರದ ಸವಲತ್ತನ್ನು ಪಡೆಯುವುದು ಜನಸಾಮಾನ್ಯರು ಪಡೆಯವುದು ಅವರ ಹಕ್ಕಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಪ್ರತಿಪಾದಿಸಿದ್ದಾರೆ. ಈ ದೆಸೆಯಲ್ಲಿ ಸರಕಾರದ ಯೋಜನೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿ.ಪಂ.ಸದಸ್ಯ ರಾದ ತುಂಗಪ್ಪ ಬಂಗೇರ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಡಕೆಗೆ ಕೊಳೆರೋಗ ಭಾದಿಸಿರುವುದರಿಂದ ರೈತರು ಕಂಗಾಲಾಗಿದ್ದು,ರೈತರಿಗೆ ಗರಿಷ್ಠ ಪ್ರಮಾಣದ ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಮನವಿ ಮಾಡಿದರು. ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯೆ ಗೀತಾ ಚಂದ್ರಶೇಖರ್, ಪುರಸಭಾಸದಸ್ಯರಾದ ಗೋವಿಂದ ಪ್ರಭು,ಶಶಿಕಲಾ .ಬಿ,ರೇಖಾ ರಮಾನಾಥ ಪೈ,ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮೊದಲಾದವರಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಗ್ರಾಮ ಕರಣಕರು , ಗ್ರಾಮ ಸಹಾಯಕರು,ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಪ್ರಕೃತಿ ವಿಕೋಪ ಪರಿಹಾರ ಧನ ರೂ. 10,76,252 ವಿತರಿಸಿದರೆ, ರಾಷ್ಟ್ರೀಯ ಕುಟುಂಬ ಸಹಾಯಧನ 6,80,000 ರೂಗಳನ್ನು ವಿತರಿಸಲಾಯಿತು. ಒಟ್ಟು 60 ಸಾವಿರ ರೂ ಅಂತ್ಯಸಂಸ್ಕಾರ ನಿಧಿ ವಿತರಿಸಲಾಯಿತು. 175 ಮಂದಿ ಫಲಾನುಭವಿಗಳು ಸರಕಾರದ ಈ ಯೋಜನೆಯ ಲಾಭ ಪಡೆದರು.