ನವಚೇತನ ಸ್ನೇಹ ಸಂಗಮ ಪುತ್ತೂರು ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ಬಂಟ್ವಾಳ ಆಶ್ರಯದಲ್ಲಿ’ಅಕಾಲ ಹಲಸು ಸಂಗಮ ಸೆ.8 ಮತ್ತು 9 ರಂದು ಎರಡು ದಿನಗಳ ಕಾಲ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಗುರುವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸೆ.8 ರಂದು ಶಾಸಕ ಯು.ರಾಜೇಶ್ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಬಳಿಕ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆಯವರು ’ಹಲಸಿನ ವಿಶ್ವ ದರ್ಶನ’ ವಿಚಾರದ ಬಗ್ಗೆ ಮಾತನಾಡಲಿದ್ದು, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ. ಆನಂದ ಅತಿಥಿಯಾಗಿ ಉಪಸ್ಥಿತರಿರುತ್ತಾರೆ. ಬಳಿಕ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ವಿವರಿಸಿದರು.
ಸೆ.9 ರಂದು ಪೂರ್ವಾಹ್ನ ೧೦ ಗಂಟೆಗೆ ’ಹಲಸು ಮಾತುಕತೆ’ಗೋಷ್ಠಿ ಜರುಗಲಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅಧ್ಯಕ್ಷತೆಯಲ್ಲಿ ಗ್ಯಾಬ್ರಿಯಲ್ ಸ್ಟಾನಿ ವೇಗಸ್, ಶಿವಣ್ಣ ಸಖರಾಯಪಟ್ಟಣ, ವೇಣುಗೋಪಾಲ್ ಎಸ್.ಜಿ. ವಿಚಾರ ಮಂಡಿಸಲಿದ್ದಾರೆ. ಬಳಿಕ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಮಧ್ಯಾಹ್ನ 2ರಿಂದ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ ನಡೆಯುವುದು. ಸಂಜೆ 5 ಗಂಟೆಗೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು. ಮಾಜಿ ಸಚಿವರಾದ ಬಿ.ರಮಾನಾಥ ರೈ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು .
ಕರ್ನಾಟಕದಲ್ಲಿ ಹಲಸಿನ ಆಂದೋಲನ ಆರಂಭವಾಗಿ ಹತ್ತು ವರುಷ. ನಿರ್ಲಕ್ಷಿತ ಹಣ್ಣು ಎನ್ನುವ ಹಣೆಪಟ್ಟಿಯ ಶಾಪ ಈಗ ವಿಮೋಚನೆಗೊಂಡಿದೆ. ನೂರಾರು ಮೇಳಗಳು ಸಂಪನ್ನಗೊಂಡಿವೆ. ಕೃಷಿವಿಶ್ವವಿದ್ಯಾನಿಲಯ, ಇಲಾಖೆಗಳು ಹಲಸಿನೆಡೆ ಮುಖ ಮಾಡಿವೆ. ಮೌಲ್ಯವರ್ಧಿತ ಉತ್ಪನ್ನಗಳುಸಿದ್ಧಗೊಳ್ಳುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲಸಿನ ಉತ್ಪನ್ನಗಳು ಮನೆಮಾತಾಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹಲಸು ಬದುಕಿನ ಒಂದು ಭಾಗವಾಗಬೇಕು. ನಮ್ಮ ಅಡುಗೆ ಮನೆಯಲ್ಲಿ ಪ್ರತ್ಯೇಕವಾದ ಸ್ಥಾನ ಪಡೆಯಬೇಕು. ಆರೋಗ್ಯಕ್ಕೆ ಪೂರಕವಾದ ಹಲಸಿನ ಖಾದ್ಯಗಳು ಅನ್ನದ ಬಟ್ಟಲಿಗೆ
ಮತ್ತೊಮ್ಮೆ ಬರಬೇಕು. ಅದರ ಮೌಲ್ಯವರ್ಧಿತ ಉತ್ಪನ್ನಗಳು ಮನೆಮಟ್ಟದಲ್ಲಿ ತಯಾರಾಗಬೇಕು. ಈ ಆಶಯದಲ್ಲಿ ಈ ’ಅಕಾಲ ಹಲಸು ಸಂಗಮ’ ಎನ್ನುವ ಎರಡು ದಿವಸದ ಹಲಸು ಕಾರ್ಯಾಗಾರವನ್ನು ಏರ್ಪಡಿಸಲಾಗುತ್ತಿದೆ ಎಂದು ಸುದರ್ಶನ್ ಜೈನ್ ತಿಳಿಸಿದರು.ಈ ಸಂದರ್ಭ ಹಲಸಿನ ಖಾದ್ಯಗಳ ಪ್ರದರ್ಶನ, ವಿವಿಧ ಮಳಿಗೆಗಳಲ್ಲಿ ಹಲಸಿನ ಉತ್ಪನ್ನಗಳ ಮಾರಾಟಕ್ಕೂ ಅವಕಾಶವಿದೆ.ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸಮಿತಿ ಅಧ್ಯಕ್ಷ ಜಿ.ಆನಂದ, ಸಂಚಾಲಕ ಜಯಾನಂದ ಪೆರಾಜೆ, ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ, ಪ್ರಮುಖರಾದ ಸುಭಾಶ್ಚಂದ್ರ ಜೈನ್, ಮಧುಸೂಧನ್ ಶೆಣೈ, ಮೋಹನ್ ಶ್ರೀಯಾನ್, ಗೋಪಾಲ ಅಂಚನ್, ಪಾಂಡುರಂಗ ಭಟ್, ಮಹಾಬಲೇಶ್ವರ ಹೆಬ್ಬಾರ್ ಉಪಸ್ಥಿತರಿದ್ದರು.