ಒಳ್ಳೇ ಟೀಚರ್ ಆಗಬೇಕಾದ್ರೆ ಕೈಕಟ್ ಬಾಯ್ ಮುಚ್ ಅನ್ನಬೇಕಾಗಿಲ್ಲ. ಮಕ್ಕಳನ್ನು ಗದರಿಸಬೇಕಾಗಿಯೂ ಇಲ್ಲ, ಅತಿ ಶಿಸ್ತು ಮಾಡಬೇಕಾಗಿಯೂ ಇಲ್ಲ. ಇಸಂ ಗಳನ್ನು ತೊರೆದು, ಮನುಷ್ಯತ್ವ, ಸಮಾನತೆ, ಪ್ರೀತಿ ಹಂಚುವ ಕಾರ್ಯಗಳನ್ನು ನಡೆಸುವ ಶಿಕ್ಷಕ ಸದಾ ವಿದ್ಯಾರ್ಥಿಯ ನೆನಪಿನಲ್ಲಿ ಉಳಿಯುತ್ತಾನೆ.
ಹೀಗಂದವರು ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಕುಮಾರಸ್ವಾಮಿ.
ಬಂಟ್ವಾಳ ಎಸ್.ಡಿ.ಎಂ. ಹಾಲ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ನೆನಪಿಗೆ ಗುರುವಂದನಾ ಸಮಾರಂಭ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಧಾನ ಉಪನ್ಯಾಸವನ್ನು ಅವರು ನೀಡಿದರು.
ಶಿಕ್ಷಕ ಇಂದು ಮಾದರಿಯಾಗಬೇಕಿರುವುದು ಮನುಷ್ಯತ್ವವನ್ನು ರೂಢಿಸಿಕೊಳ್ಳುವ ಮೂಲಕ ಎಂದು ಹೇಳಿದ ಅವರು, ಒಳ್ಳೆಯತನ ಮತ್ತು ಮನುಷ್ಯತ್ವ ಗುಣ ಶಿಕ್ಷಕರಲ್ಲಿದ್ದರೆ, ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ಶಾಲೆಗೆ ಹೋದ ಬಳಿಕ ಸಂಸ್ಥೆಯನ್ನು ಪ್ರೀತಿಸುವ ಕೆಲಸವನ್ನು ಪ್ರೇಮಿಸುವ ಕಾರ್ಯ ಶಿಕ್ಷಕ ಮಾಡಬೇಕು. ಶಾಲೆಯ ಒಳಗೂ ಹೊರಗೂ ಶಿಕ್ಷಕ ಆದರ್ಶನಾಗಿರಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಗೌರವಯುತವಾದದ್ದು. ಸ್ವಸ್ಥ ಸಮಾಜವನ್ನು ರೂಪಿಸುವ ಕಾರ್ಯವನ್ನು ಮಾಡುತ್ತದೆ ಎಂದು ಹೇಳಿದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್. ಗಟ್ಟಿ, ಕಮಲಾಕ್ಷಿ ಪೂಜಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ಶಿಕ್ಷಕ ದಿನಾಚರಣೆ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ತಾಪಂ ಸದಸ್ಯ ಗಣೇಶ ಸುವರ್ಣ ತುಂಬೆ, ಇಲಾಖೆಯ ಶ್ರೀಕಾಂತ್ ಉಪಸ್ಥಿತರಿದ್ದರು. ಕಳೆದ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಲಾಯಿತು. ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮ ನಡೆಯಿತು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.