ಬಂಟ್ವಾಳ

ಕೊಳೆರೋಗಕ್ಕೆ ಉದುರಿದ ಅಡಕೆ – ರೈತರಿಂದ ಪ್ರತಿಭಟನೆ

ಅಡಕೆ ಕೊಳೆರೋಗಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಬಂಟ್ವಾಳ ಅಡಿಕೆ ಬೆಳೆಗಾರರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಆಶ್ರಯದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗ ನಡೆಯಿತು. ಪರಿಹಾರ ಸಿಗದೆ ಸಂಕಷ್ಟದ್ಲಲಿರುವ ರೈತರು ಕೊಳೆರೋಗಕ್ಕೆ ತುತ್ತಾಗಿ ಉದುರಿದ ಅಡಕೆಯನ್ನು  ಸುರಿದು ಪ್ರತಿಭಟನೆ ನಡೆಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತಡಿಸಿದರು.  ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದಲ್ಲದೆ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ  ಹಿನ್ನಲೆಯಲ್ಲಿ  ಪ್ರತಿಭಟನೆ ಹಿಂಪಡೆಯಲಾಯಿತು.

ಜಾಹೀರಾತು

ಕೊಳೆರೋಗಕ್ಕೆ ತುತ್ತಾಗಿರುವ  ರೈತರಿಗೆ ಎಕರೆಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘ ಹಸಿರು ಸೇನೆಯ ಜಿಲಾಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿ ಕಳೆದ ಸರಕಾರದ ಅವಧಿಯಲ್ಲಿ ಕೊಳೆರೋಗಕ್ಕೆ ಬಂದ ಪರಿಹಾರಧನದ ಚೆಕ್ ಈಗಲೂ ತಹಶೀಲ್ದಾರ್ ಕಚೇರಿಯಲ್ಲಿ ಕೊಳೆಯುತ್ತಿದೆ. ಎಂದ ಆರೋಪಿಸಿದರು.  ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ ಮುಖ್ಯಮಂತ್ರಿಗಳು ಗದ್ದೆಯಲ್ಲಿ ನೇಜಿ ನೆಟ್ಟು ರೈತರ ಬಗ್ಗೆ ಕಾಳಜಿ ತೋರುವುದು ಮಾತ್ರವಲ್ಲ ಜಿಲ್ಲೆಗೆ ಆಗಮಿಸಿ ಇಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಆಲಿಸಿ. ರೈತರಿಗೆ ಹತ್ತು ರೂಪಾಯಿ ಪರಿಹಾರವನ್ನು ಇಲಾಖೆ ನೀಡಿಲ್ಲ. ರೈತರು ನೀಡುವ ಅರ್ಜಿಗಳನ್ನು ಸ್ವೀಕರಿಸುವ ತಾಳ್ಮೆಯೂ ಅಧಿಕಾರಿಗಳಲ್ಲಿಲ್ಲ ಎಂದು ಟೀಕಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಅರೈತರಿಲ್ಲದಿದ್ದರೆ ಈ ದೆಶವೇ ನಾಶವಾಗುತ್ತದೆ. ರೈತರೆಲ್ಲರೂ ಒಗ್ಗಟ್ಟಾಗಿದ್ದರೆ  ಸರಕಾರವೇ  ನಮ್ಮ ಮನೆ ಬಾಗಿಲೆಗೆ ಬರುತ್ತದೆ ಎಂದರು.

ರೈತ ಸಂಘದ ಮುಖಂಡರಾದ ಎನ್.ಮನೋಹರ ಶೆಟ್ಟಿ, ಸುಬ್ರಹ್ಮಣ್ಯ ಶಾಸ್ತ್ರೀ, ಮಾಣಿಕ್ಯರಾಜ್ ಜೈನ್, ಎಂ. ಸುಬ್ರಹ್ಮಣ್ಯ ಭಟ್, ಮುರುವ ಮಹಾಬಲ ಭಟ್  ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಬಳಿ ನಿಯೋಗ :    

ಪ್ರತಿಭಟನಾ ನಿರತ ರೈತನ್ನು ಭೇಟಿಯಾದ ಶಾಸಕ ರಾಜೇಶ್ ನಾಯ್ಕ್, ಅಡಕೆಗೆ ಕೊಳೆರೋಗ ಬಾಧಿಸಿ ರೈತರು ಕಂಗಾಲಾಗಿರುವ ಕುರಿತು ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ವಿವರಿಸಿದ್ದು, ಇದಕ್ಕೆ ಸ್ಪಂದಿಸಿರುವ ಸಿಎಂ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದು, ಅದರಂತೆ ಅಧಿಕಾರಿಗಳನ್ನೊಳಗೊಂಡ ಎರಡು ತಂಡ ಬುಧವಾರದಿಂದ ಸಮೀಕ್ಷೆ ಕಾರ್ಯ ನಡೆಸಲಿದೆ ಎಂದು ಮನವರಿಕೆ ಮಾಡಿದರು. ಹಾಗೆಯೇ ಸೆ.10 ರವರೆಗೆ ನೀಡಿರುವ ಸಮೀಕ್ಷಾ ಗಡುವನ್ನು ಮತ್ತೆ ವಿಸ್ತರಿಸುವಂತೆಯೂ ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ ಮತ್ತು ಪ್ರಾಕೃತಿಕ ವಿಕೋಪದಡಿ ರೈತರಿಗೆ ಪರಿಹಾರ ನೀಡುವಂತೆಯೂ ಒತ್ತಾಯಿಸಲಾಗಿದೆ ಎಂದು ತಿಳಿಸಿದ ಶಾಸಕ, ರೈತರ ಸಮಸ್ಯೆ ತನಗೂ ಅರಿವಿರುವುದರಿಂದ ಜಿಲ್ಲೆಯ ರೈತರನ್ನೊಳಗೊಂಡ ನಿಯೋಗವನ್ನು ಮುಖ್ಯಮಂತ್ರಿಯವರ ಬಳಿ ಕರೆದೊಯ್ದು ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಬೆಳೆ ವಿಮೆಯೋಜನೆಯನ್ನು  ಪ್ರತಿಯೊಬ್ಬ ರೈತ ಅರಿತುಕೊಂಡು ಇದರ ಸದುಪಯೋಗಪಡೆಯುವಂತೆ ಅವರು ಸಲಹೆ ನೀಡಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಲಾಯಿತು. ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಸೆ.೫ ರಿಂದಲೇ ಅಡಕೆ,ಕಾಳಮೆಣಸು ಬೆಳೆ ಹಾನಿಗೆ ಸಂಬಂಧಿಸಿ ರೈತರಿಂದ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಮಾಹಿತಿ ನೀಡುವ ಮೂಲಕ ಪ್ರತಿಭಟನೆಗೆ ತೆರೆ ಬಿತ್ತು. ಇದಕ್ಕು ಮುನ್ನ ತಹಶೀಲ್ದಾರರು ಮನವಿ ಸ್ವೀಕರಿಸಲು ಬಂದಾಗ ರೈತ ಮುಖಂಡರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಬಳಿಕ ಸಾಮಾಜಿಕ ಹೋರಾಟಗಾರ ಹರಿಕೃಷ್ಣ ಬಂಟ್ವಾಳ್, ಜಿಪಂಸದಸ್ಯ ತುಂಗಪ್ಪ ಬಂಗೇರ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ತಹಶೀಲ್ದಾರರು ರೈತರ ಅರ್ಜಿ ಸ್ವೀಕರಿಸಿದರು. ರೈತ ಮುಖಂಡರಾದ ಎನ್.ಕೆ.ಇದ್ದಿನಬ್ಬ, ಸುದೇಶ್ ಮಯ್ಯ, ಶೇಖ್ ಅಬ್ದುಲ್ಲಾ, ದಯಾನಂದ ಶೆಟ್ಟಿ,  ತಾಪಂ ಸದಸ್ಯ ಪ್ರಭಾಕರಪ್ರಭು, ಪುರುಷೋತ್ತಮ ಸರಪಾಡಿ, ಅಶೋಕಶೆಟ್ಟಿ ಸರಪಾಡಿ, ಪುರುಷೋತ್ತಮ ಶೆಟ್ಟಿ  ವಾಮದಪದವು, ರತ್ನಕುಮಾರ್ ಚೌಟ, ರಾಮದಾಸ್ ಬಂಟ್ವಾಳ, ಪುರಸಭಾ ಸದಸ್ಯ ಗೋವಿಂದ ಪ್ರಭು ಮೊದಲಾದವರಿದ್ದರು. ರೈತ ಸಂಘ ಹಸಿರು ಸೇನೆಯ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ವಂದಿಸಿದರು.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಠಿಯಿಂದಾಗಿ ಬಂಟ್ವಾಳ ತಾಲೂಕಿನಲ್ಲಿ ಅಡಕೆ,ಕಾಳಮೆಣಸು ಬೆಳೆಗಳು ಹಾನಿಯಾಗಿರುವ ಪ್ರಮಾಣದ ಸಮೀಕ್ಷೆ ಹೋಬಳಿ ಮತ್ತು ತಾಲೂಕುಮಟ್ಟದಲ್ಲಿ ಸೆ.5 ರಿಂದ 10 ರವರೆಗೆ ನಡೆಯಲಿದ್ದು, ರೈತರು ತಮ್ಮ,ತಮ್ಮ ಗ್ರಾಮಪಂಚಾಯತ್ ನಲ್ಲಿ ನಷ್ಟದ ವಿವರನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ದಲ್ಲಿ ವಿವರದೊಂದಿಗೆ ರೈತರು ಜಮೀನಿನ ಪಹಣಿಪತ್ರ, ಆಧಾರ್ ಕಾರ್ಡ್ ,ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಲಗತ್ತೀಸುವಂತೆ ಅವರು ಕೋರಿದ್ದಾರೆ. ಪಾಣೆಮಂಗಳೂರು ಹೋಬಳಿ : ಸಹಾಯಕ ತೋಟಗಾರಿಕಾ ಅಧಿಕಾರಿ, ಕಂದಾಯ ನಿರೀಕ್ಷಕರು, ಸಹಾಯಕ ಕೃಷಿ ಅಧಿಕಾರಿ   ಬಂಟ್ವಾಳ ಹೋಬಳಿ : ಸಹಾಯಕ ತೋಟಗಾರಿಕಾ ಅಧಿಕಾರಿ, ಕಂದಾಯ ನಿರೀಕ್ಷಕರು, ಸಹಾಯಕ ಕೃಷಿ ಅಧಿಕಾರಿ, ವಿಟ್ಲಹೋಬಳಿ: ಸಹಾಯಕ ತೋಟಗಾರಿಕಾ ಅಧಿಕಾರಿ,ಕಂದಾಯ ನಿರೀಕ್ಷಕರು,ಸಹಾಯಕ ಕೃಷಿ ಅಧಿಕಾರಿ ಇವು ಕಚೇರಿಗಳು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.