ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಕಾಂ ತರಗತಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವಜನತೆ ಉನ್ನತ ಶಿಕ್ಷಣದ ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹುಡುಗಿಯರಿಗೆ ಈಗ ಅವಕಾಶಗಳ ಬಾಗಿಲು ತೆರೆಯುತ್ತಿದೆ. ಉನ್ನತ ಶಿಕ್ಷಣದಿಂದಾಗಿ ಗಂಡು ಮಕ್ಕಳಿಗೆ ಸರಿಮಿಗಿಲಾಗಿ ಎಲ್ಲಾ ಉದ್ಯೋಗಗಳಲ್ಲೂ ಹೆಣ್ಣುಮಕ್ಕಳು ತೊಡಗಿಸಿಕೊಳ್ಳುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಗಿರೀಶ್ ಭಟ್ ಅಜಕ್ಕಳ, ಸರಕಾರಿ ಕಾಲೇಜುಗಳಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಸ್ನಾತಕೋತ್ತರ ಶಿಕ್ಷಣ ಲಭ್ಯ ಎಂದರು.
ಕಾಲೇಜು ಬೆಳೆದು ಬಂದ ಹಾದಿ ನೆನಪಿಸಿಕೊಂಡ ಅವರು, ಮಧ್ಯಾಹ್ನದ ಊಟದ ವ್ಯವಸ್ಥೆ ಮೊದಲಾದ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಮಚಂದ್ರ ಸುವರ್ಣ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೀರ್ತಿರಾಜ್ ವೇದಿಕೆಯಲ್ಲಿದ್ದರು. ಸ್ನಾತ್ತಕೋತ್ತರ ವಿಭಾಗದ ಸಂಯೋಜಕರಾದ ಪ್ರೊ. ಹೈದರಾಲಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಶಶಿಕಲಾ ಕೆ ವಂದಿಸಿದರು.