ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಕಲಾಸಕ್ತ ಮನಸುಗಳನ್ನು ಜತೆಯಾಗಿಸಿಕೊಂಡು ಯಕ್ಷಸೇವೆ ಆಯೋಜನೆ ಮಾಡುವುದು ಹಾಗೂ ಯಕ್ಷಗಾನದ ಎಲ್ಲಾ ಹಂತಗಳಲ್ಲೂ ಶ್ರಮಿಸಿದವರನ್ನು ಸಮ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ, ವಿಶ್ರಾಂತ ಕುಲಪತಿ ಡಾ|ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.
ಮಂಗಳೂರು ಪುರಭವನದಲ್ಲಿ ಶನಿವಾರ ರಾತ್ರಿ ನಡೆದ, ವಾಟ್ಸಾಪ್ ಬಳಗವಾದ ‘ಭ್ರಾಮರೀ ಯಕ್ಷಮಿತ್ರರು-ಮಂಗಳೂರು’ ಇದರ ಮೂರನೇ ವರ್ಷದ ಯಕ್ಷವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಯಕ್ಷಗಾನದ ವಿಷಯಕ್ಕಾಗಿಯೇ ಮೀಸಲಿಟ್ಟ ವಾಟ್ಸಪ್ ಬಳಗವಾಗಿ ಆರಂಭಗೊಂಡು ನೋಂದಾಯಿಸಲ್ಪಟ್ಟ ಬಳಗವಾಗಿ ಭ್ರಾಮರೀ ಯಕ್ಷಮಿತ್ರರು ಗುರುತಿಸಿಕೊಂಡಿದೆ. ಯಕ್ಷಗಾನದಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿ ನೀಡಿ ಗುರುತಿಸುವುದರ ಜತೆಗೆ ರಂಗದ ನೇಪಥ್ಯದಲ್ಲಿ ದುಡಿದು ಯಕ್ಷಗಾನದ ಉಳಿವಿಗೆ ಶ್ರಮಿಸಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶ ಸರ್ವರಿಗೂ ಮಾದರಿ ಎಂದರು.
ಖ್ಯಾತ ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ್ ಮಿಜಾರು ಅವರಿಗೆ ‘ಭ್ರಾಮರಿ ಯಕ್ಷಮಣಿ’ ಪ್ರಶಸ್ತಿ, ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವ ಸಮ್ಮಾನ ಹಾಗೂ ನೇಪಥ್ಯ ಕಲಾವಿದರಾದ ಬಿ.ಐತ್ತಪ್ಪ ಟೈಲರ್, ರಘು ಶೆಟ್ಟಿ ನಾಳ ಅವರನ್ನು ಸಮ್ಮಾನಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಬಾಸ್ಕರ್ ಕೆ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್, ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್, ಬ್ರಿಟಿಷ್ ಬಯಲೋಜಿಕಲ್ಸ್‌ನ ವಲಯ ಪ್ರಬಂದಕರಾದ ಸಿ.ಎಸ್ ಭಂಡಾರಿ, ಮನಪಾ ಮುಖ್ಯ ಸಚೇತಕ ಎಂ.ಶಶಿಧರ ಹೆಗ್ಡೆ, ಉದ್ಯಮಿ ರಮೇಶ್ ಶೆಟ್ಟಿ ಕಾರ್ಕಳ, ಶಾರದಾ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್ ಮುಖ್ಯ ಅತಿಥಿಗಳಾಗಿದ್ದರು.
ಭ್ರಾಮರೀ ಯಕ್ಷಮಿತ್ರರು ಬಳಗದ ಪ್ರಮುಖರಾದ ವಿನಯ್ ಕೃಷ್ಣ ಸ್ವಾಗತಿಸಿದರು. ಸದಸ್ಯರಾದ ಶಾಂತಾರಾಮ ಕುಡ್ವ, ಗುರುರಾಜ ಹೊಳ್ಳ ಬಾಯಾರು, ಸತೀಶ್ ಮಂಜೇಶ್ವರ, ಉಮೇಶ್ ಶೆಟ್ಟಿ ಸಮ್ಮಾನಿತರ ಪತ್ರವಾಚಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ತೆಂಕು ಹಾಗೂ ಬಡಗುತ್ತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಸತ್ಯ ಹರಿಶ್ಚಂದ್ರ, ಶೂರ್ಪನಖಾ ವಿವಾಹ ಮತ್ತು ಮಕರಾಕ್ಷ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.