ಬಡವ ಬಲ್ಲಿದನೆಂಬ ಬೇಧ ಬೇಡ, ಸರ್ವರನ್ನೂ ಸಮಾನ ದೃಷ್ಟಿಯಿಂದ ನೋಡು, ಇದು ಶ್ರೀಕೃಷ್ಣ ಭಗವಂತ ಜಗತ್ತಿಗೆ ಬೋಧಿಸಿದ ನೀತಿ ಪಾಠ, ಶ್ರೀಕೃಷ್ಣನ ಬದುಕೇ ನಮಗೆಲ್ಲರಿಗೂ ಆದರ್ಶ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭಾಕಾರ್ಯಕ್ತಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದುಷ್ಟರಿಗೆ ಶಿಕ್ಷೆ , ಶಿಷ್ಟರಿಗೆ ರಕ್ಷಣೆ ನೀಡುತ್ತಾ ಜಗತ್ ರಕ್ಷಕನಾದ ಶ್ರೀಕೃಷ್ಣ ಲೋಕದ ಗುರುವಾಗಿ ಮೆರೆದವನು. ಮಗುವಾಗಿನಿಂದ ತೊಡಗಿ ಪ್ರತೀ ಹಂತದಲ್ಲೂ ಜಗತ್ತನ್ನು ರಕ್ಷಿಸಿದ ಶ್ರೀಕೃಷ್ಣ ನ ಮಹಿಮೆ ಅಪಾರ ಎಂದು ಅವರು ಹೇಳಿದರು.
ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ಮಾತನಾಡಿ, ಶ್ರೀಕೃಷ್ಣ ಎಲ್ಲರನ್ನೂ, ಎಲ್ಲವನ್ನೂ ಗೆದ್ದವ. ಮಗುವಾಗಿ, ಗೋಪಾಲಕನಾಗಿ, ಗುರುವಾಗಿ, ದೇವರಾಗಿ, ಸೈನಿಕನಾಗಿ, ಸ್ನೇಹಿತನಾಗಿ, ಸಹೋದರನಾಗಿ,ಜ್ಞಾನಿಯಾಗಿ, ರಕ್ಷಕನಾಗಿ, ಆಡಳಿತಗಾರನಾಗಿ, ರಾಜನೀತಿ ಪರಿಣತನಾಗಿ, ಸಾರಥಿಯಾಗಿ ಹೀಗೆ ಯಾವುದು ಹೇಗಿರಬೇಕು ಎಂದು ಮನದಟ್ಟು ಮಾಡಿದವ. ದೇವರ ನಡುವೆ ಕಾಣುವ ಆದರ್ಶ ಮನುಷ್ಯ ಶ್ರೀಕೃಷ್ಣ ಎಂದರು.
ಎಎಸ್ ಐ ರಾಮಣ್ಣ ಗೌಡ, , ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಬಿ ಸಿ ವಿಠಲ್, ಅಂಜನಪ್ಪ ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಶ್ರೀನಿವಾಸ, ಚುನಾವಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ,ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬಂದಿ ವರ್ಗ ಗ್ರಾಮ ಕರಣಿಕರು ಗ್ರಾಮ ಸಹಾಯಕರು ಹಾಜರಿದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ,ವಂದಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ ಕಾರ್ಯಕ್ರಮ ನಿರ್ವಹಿಸಿದರು.