ಕೊನೆಗೂ ಪುರಸಭೆ ಚುನಾವಣೆ ಮುಗಿದಿದೆ. ಶೇ. 72 ರಷ್ಟು ಮತ ಚಲಾವಣೆಯೂ ಆಗಿದೆ. ಇದೀಗ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಸದ್ಯಕ್ಕೆ ಮತಯಂತ್ರಗಳು ಮಿನಿ ವಿಧಾನಸೌಧದಲ್ಲಿ ಭದ್ರವಾಗಿವೆ. ಸೋಮವಾರ ಬೆಳಗ್ಗೆ 8 ಕ್ಕೆ ಮತ ಎಣಿಕೆ ನಡೆಯುತ್ತದೆ. ಮಧ್ಯಾಹ್ನ 12ರ ವೇಳೆಗಾಗಲೆಲ್ಲ ಜಯಘೋಷಗಳು ಕೇಳಿಸಬಹುದು. ಎಂದಿನಂತೆಯೇ ಬಂಟ್ವಾಳ ನ್ಯೂಸ್ ಹಾಗೂ ಅಧಿಕೃತ ಫಲಿತಾಂಶವನ್ನು ನಾಳೆ ನಿಮಗೆ ನೀಡಲಿದೆ. ಯಾವುದೇ ಅಬ್ಬರದ, ಆತುರದ ಸುದ್ದಿಗಳನ್ನು ಒದಗಿಸುವ ಬದಲು ಸ್ಪಷ್ಟ ಸುದ್ದಿಯನ್ನು ಸಕಾಲಕ್ಕೆ ಒದಗಿಸಲಿದೆ.
ಬಂಟ್ವಾಳ ಪುರಸಭೆಯಲ್ಲಿ ಒಟ್ಟು ಸ್ಥಾನ 27. ಅವುಗಳ ಪೈಕಿ ಬಿಜೆಪಿ 27, ಕಾಂಗ್ರೆಸ್ 25, ಜೆಡಿಎಸ್ 5, ಎಸ್.ಡಿ.ಪಿ.ಐ. 12, ಸಿಪಿಐ 1 ಮತ್ತು ಇತರರು 1 ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜೆಡಿಎಸ್ ಮತ್ತೊಂದು ಸ್ಥಾನದಲ್ಲಿ ಸಿಪಿಐ ಜೊತೆ ಮೈತ್ರಿ ಮಾಡಿಕೊಂಡಿದೆ.
ಕಳೆದ ಸಾಲಿನಲ್ಲಿ ಪುರಸಭೆಯಲ್ಲಿ 23 ಸ್ಥಾನಗಳಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ, 3 ಎಸ್ ಡಿ ಪಿ ಐ, 1 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು.
ಆದರೆ ಈ ಬಾರಿ ಸೀಟುಗಳು ಜಾಸ್ತಿಯಾದವಷ್ಟೇ ಅಲ್ಲ, ಕೆಲವು ಪ್ರದೇಶಗಳಲ್ಲಿ ಮತದಾರರು ಬೇರೆ ಬೇರೆ ವಾರ್ಡುಗಳಿಗೆ ಹಂಚಿಹೋದರು. ಹೀಗಾಗಿ ಸ್ಪಷ್ಟ ಲೆಕ್ಕಾಚಾರ ಅಭ್ಯರ್ಥಿಗಳಿಗೂ ಸಿಗುತ್ತಿಲ್ಲ.
ಆದರೆ 12 ಸ್ಥಾನಗಳಲ್ಲಿ ಎಸ್.ಡಿ.ಪಿ.ಐ ಮತ್ತು 5 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯ ಫಲಿತಾಂಶದ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಂಟ್ವಾಳನ್ಯೂಸ್ ಓದುಗರು ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಎಸ್.ಡಿ.ಪಿ.ಐ, ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆ. ಪುರಸಭೆಯ ಫಲಿತಾಂಶದ ದಿಕ್ಕನ್ನೇ ಬದಲಾಯಿಸುವ ಮುನ್ಸೂಚನೆಯನ್ನೂ ಈ ಬಾರಿ ಎಸ್.ಡಿ.ಪಿ.ಐ. ತನ್ನ ಪ್ರಚಾರದ ವೈಖರಿಯಿಂದ ನೀಡಿದೆ.
ಒಟ್ಟು 34,102 ಮತದಾರರ ಪೈಕಿ 16847 ಪುರುಷರು ಮತ್ತು 17,255 ಮಹಿಳಾ ಮತದಾರರು ಇರುವ ಬಂಟ್ವಾಳ ಪುರಸಭೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ 11,840 ಪುರುಷರು, 12,836 ಮಹಿಳೆಯರು ಸೇರಿ ಒಟ್ಟು 24, 676 ಮಂದಿ ಮತ ಚಲಾಯಿಸಿದ್ದಾರೆ.
ಯಾರು ವಿರೋಧ ಪಕ್ಷಕ್ಕೆ:
ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿಜೆಪಿ ವಿರೋಧ ಪಕ್ಷವಾಗಿತ್ತು. ಈ ಬಾರಿ ಸ್ಪಷ್ಟ ಬಹುಮತ ತಮಗೆ ಬರುತ್ತದೆ, ಇಲ್ಲದಿದ್ದರೆ, ನಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ ಮಾಧ್ಯಮ ಸಂವಾದದಲ್ಲಿ ಬಿಜೆಪಿ ಹೇಳಿದರೆ, ಕಾಂಗ್ರೆಸ್ ಕೂಡ ಅದನ್ನೇ ಹೇಳಿದೆ. ಒಂದೊಂದು ಮತವೂ ಅತ್ಯಂತ ಅಮೂಲ್ಯವಾದ ಸ್ಥಳೀಯ ಸಂಸ್ಥೆ ಚುನಾವಣೆಯ ರಿಸಲ್ಟ್ ಫೊಟೋ ಫಿನಿಶ್ ಬರುವ ಸಾಧ್ಯತೆಗಳೇ ಜಾಸ್ತಿ,