ಬಂಟ್ವಾಳ

ಪುರಸಭೆಗೆ ಬಿಗ್ ಫೈಟ್ – ಮತದಾನ ಮುಕ್ತಾಯಕ್ಕೆ ಕ್ಷಣಗಣನೆ

ಬಂಟ್ವಾಳ ಪುರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 34,102 ಮತದಾರರ ಪೈಕಿ ಶೇ. 60ರಷ್ಟು ಮತ ಚಲಾವಣೆ ಸಂಜೆಯವರೆಗೆ ನಡೆದಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿತ್ತು.

pics: Kishor peraje

ಕೆಲವೆಡೆ ಘರ್ಷಣೆಯ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ಇತ್ತಾದರೂ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು.

4 ವಾರ್ಡುಗಳನ್ನು ಹೆಚ್ಚಿಸಿಕೊಂಡು 27 ವಾರ್ಡುಗಳನ್ನು ಹೊಂದಿರುವ ಬಂಟ್ವಾಳ ಪುರಸಭೆಗೆ 71 ಮಂದಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಕಾಂಗ್ರೆಸ್ 25, ಬಿಜೆಪಿ 27, ಜೆಡಿಎಸ್ 5, ಎಸ್.ಡಿ.ಪಿ.ಐ. 12, ಇತರ 2 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 18 ಸೂಕ್ಷ್ಮ ಮತ್ತು 14 ಅತಿ ಸೂಕ್ಷ್ಮ ಮತಗಟ್ಟೆಗಳು ಇರುವ ಬಂಟ್ವಾಳ ಪುರಸಭೆಯಲ್ಲಿ 32 ವಾರ್ಡುಗಳಲ್ಲಿ 16,847 ಪುರುಷರು, 17255 ಮಹಿಳೆಯರು ಸೇರಿದಂತೆ 34,102 ಮತದಾರರು ಇದ್ದಾರೆ.

ಕಳೆದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ,  3 ಎಸ್ ಡಿ ಪಿ ,  1 ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದರು.

ಲೊರೆಟ್ಟೊಪದವು, ಮಂಡಾಡಿ, ಮಣಿ,  ಕಾಲೇಜು ರಸ್ತೆ, ಜಕ್ರಿಬೆಟ್ಟು, ಹೊಸ್ಮರ್ , ಬಂಟ್ವಾಳ ಪೇಟೆ, ಕೆಳಗಿನಪೇಟೆ, ಭಂಡಾರಿಬೆಟ್ಟು,  ಕಾಮಾಜೆ, ಸಂಚಯಗಿರಿ, ಅಜ್ಜಿಬೆಟ್ಟು, ಗೂಡಿನಬಳಿ, ಜೋಡುಮಾರ್ಗ, ಕೈಕುಂಜೆ, ನಂದರಬೆಟ್ಟು, ಪರ್ಲಿಯಾ, ಶಾಂತಿ ಅಂಗಡಿ, ಅದ್ದೇಡಿ, ಮೊಡಂಕಾಪು, ತಲಪಾಡಿ, ಪಲ್ಲಮಜಲು, ಜೈನರಪೇಟೆ, ಆಲಡ್ಕ, ಬೋಳಂಗಡಿ, ಮೇಲ್ಕಾರ್, ಬೊಂಡಾಲ ವಾರ್ಡುಗಳಲ್ಲಿ ಬೆಳಗ್ಗೆಯೇ ಮತದಾರರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು.

ರಾಜಕೀಯದಿಂದ ನೇಪಥ್ಯಕ್ಕೆ ಸರಿದಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು, ಬೆಳಗ್ಗೆ ಬಂಟ್ವಾಳದ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಬಂಟ್ವಾಳ ಎಸ್.ವಿ.ಎಸ್. ದೇವಳ ಶಾಲೆಯಲ್ಲಿ ಪತ್ನಿಯೊಂದಿಗೆ ಸಾಲಿನಲ್ಲಿ ನಿಂತು ಬಳಿಕ ಮತ ಚಲಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಬಂಟ್ವಾಳ  ಚುನಾವಣಾಧಿಕಾರಿಗಳಾದ ರಾಜೇಶ್,ಕೆ ಮೋಹನ್ ಕುಮಾರ್, ನೋಣಯ್ಯ ನಾಯ್ಕ್ , ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಚುನಾವಣಾ ಉಪತಹಶೀಲ್ದಾರ್ ಸೀತಾರಾಮ,  ಖರ್ಚುವೆಚ್ಚ ವೀಕ್ಷಕರಾದ ಕನಕರಾಜು ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ವಿನಯ ನಾಗರಾಜ್ , ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ,ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ಹಾಜರಾಗಿದ್ದರು.

ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಎಸ್ಸೈಗಳು ಬಂದೋಬಸ್ತ್ ಜವಾಬ್ದಾರಿ ವಹಿಸಿದ್ದರು. 3 ಕೆ.ಎಸ್.ಆರ್.ಪಿ, ಒಂದು ಡಿ.ಎ.ಅರ್.  ಸ್ಟ್ರೈ ಕಿಂಗ್ ಫೋರ್ಸ್ ಹೆಚ್ಚುವರಿಯಾಗಿ ಚುನಾವಣೆಯ ಬಂದೋಬಸ್ತ್ ನಲ್ಲಿ ಭಾಗವಹಿಸಿದ್ದವು.

ಮೊಡಂಕಾಪು ಸೇರಿದಂತೆ ಕೆಲ ವಾರ್ಡುಗಳಲ್ಲಿ ಮತದಾರರನ್ನು ಕರೆದೊಯ್ಯುವ ವಿಚಾರದಲ್ಲಿ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಕೂಡಲೇ ಪೊಲೀಸರು ಅದನ್ನು ತಹಬಂದಿಗೆ ತಂದರು.

ಮಧ್ಯಾಹ್ನವಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಕ್ಯೂ ಕಡಿಮೆಯಾಯಿತು. ಸಂಜೆಯ ವೇಳೆ ಬೆರಳೆಣಿಕೆಯಷ್ಟು ಮತದಾರರು ಬೂತ್ ಗಳಲ್ಲಿ ಕಂಡುಬಂದರು.

ಇಂದೇ ಬಟವಾಡೆ:

ಇದುವರೆಗೆ ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ವಾಹನ ಚಾಲಕರಿಗೆ ಹಣದ ಬಟವಾಡೆಗಳು ತಿಂಗಳುಗಟ್ಟಲೆ ನಡೆಯುತ್ತಿದ್ದ ಪ್ರಕ್ರಿಯೆಗೆ ಶುಕ್ರವಾರ ಕಡಿವಾಣ ಬಿದ್ದಿದೆ. ಈ ಬಾರಿ ಚುನಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಹಣ ಪಾವತಿ ನಡೆಸುವ ಕಾರ್ಯ ನಡೆಯಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ