ಬಿ.ಸಿ.ರೋಡಿನ ಮೊಡಂಕಾಪುವಿನಲ್ಲಿ ಮನೆ ಮಾಲೀಕನಿಗೆ ಹಲ್ಲೆಗೈದು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕನಕಬೇಳೂರು ನಿವಾಸಿ ಪ್ರವೀಣ್ ಕೆ ( 31) ಬಂಧಿತ ಆರೋಪಿ.
ಅಗಸ್ಟ್ 8 ರಂದು ರಾತ್ರಿ ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ನಿವಾಸಿ ಜನಾರ್ದನ ಹೊಳ್ಳ ಅವರ ಮನೆ ಬಾಗಿಲು ತಟ್ಟಿದ ಹಿನ್ನಲೆಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಅವರ ತಲೆಗೆ ಬಡಿದು ಅವರ ಕತ್ತಿನಲ್ಲಿದ್ದ 75 ಸಾ.ರೂ.ಮೌಲ್ಯದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದರು.
ಬಂಧಿತನಾಗಿರುವ ಆರೋಪಿ ಪ್ರವೀಣ್ ನ ವಿರುದ್ದ ಬೆಂಗಳೂರು ಉಪ್ಪಾರಪೇಟೆ ಠಾಣೆಯಲ್ಲಿ ಮೂರು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಎಸ್.ಪಿ.ರವಿಕಾಂತೇ ಗೌಡ, ಅಡಿಷನಲ್ ಎಸ್.ಪಿ.ಸಜಿತ್ ನಿರ್ದೇಶನ ದಲ್ಲಿ, ಬಂಟ್ವಾಳ ಎ.ಎಸ್.ಪಿ.ಹ್ರಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನ ದಲ್ಲಿ, ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್ ಮತ್ತವರ ತಂಡ ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್ನೊರ್ವ ಆರೋಪಿ ತಲೆ ಮರೆಸಿದ್ದು ,ಅತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.