ಕರಾವಳಿ ಪ್ರದೇಶದಲ್ಲಿ ಉತ್ತಮ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದ್ದು, ಕಾರ್ಯಕರ್ತರು ಕಳೆದ ವಿಧಾನಸಭೆ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗೆ ಶ್ರಮಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಗೆ ಮತ್ತು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರಿಗೆ ಏರ್ಪಡಿಸಲಾದ ವಿಶೇಷ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಬಂಟ್ವಾಳ ಪುರಸಭೆ ಫಲಿತಾಂಶ ಕಾಂಗ್ರೆಸ್ ಮುನ್ನಡೆಗೆ ದಿಕ್ಸೂಚಿಯಾಗಬೇಕಿದೆ, ದ.ಕ.ಜಿಲ್ಲೆ ಕೇಸರಿಮಯವಾಗುವುದನ್ನು ತಡೆಯೊಡ್ಡಲು ಒಂದೊಂದು ಮತವೂ ಅತ್ಯಗತ್ಯ ಎಂದು ಹಿತವಚನ ನೀಡಿದರು.
ಬಿಜೆಪಿಯ ಸಿದ್ಧಾಂತ ಸರಿಯಿಲ್ಲ, ಆ ಪಕ್ಷದಲ್ಲಿರುವ ಎಲ್ಲರೂ ಕೆಟ್ಟವರಲ್ಲ ಎಂದು ಹೇಳಿದ ಗುಂಡೂರಾವ್, ಕರಾವಳಿಯಲ್ಲಿ ಬಿಜೆಪಿ ಅಪಪ್ರಚಾರದ ಮೂಲಕ ಗೆಲುವು ಸಾಧಿಸಿತು, ದ್ವೇಷಾಸೂಯೆಯ ರಾಜಕಾರಣ ಮಾಡಿ ನಮಗೆ ಸೋಲಾಗುವಂತೆ ಮಾಡಿತು ಎಂದರು.
ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂ.1 ಮಾಡಿದ್ದು ನಮ್ಮ ಸಾಧನೆ ಎಂದ ಅವರು, ದೇವರ ಹೆಸರಿನಲ್ಲಿ ಸುಳ್ಳು ಹೇಳಿ ಮಾಡಿದ ಪಕ್ಷದಿಂದ ಈ ದೇಶ ಉದ್ದಾರವಾಗಲ್ಲ. ಕಾಂಗ್ರೇಸ್ ದೇಶ ಕಟ್ಟಿದ ಪಕ್ಷ , ಹಾಗಾಗಿ ಕಾರ್ಯಕರ್ತರು ಜನರ ಬಳಿ ತೆರಳಿ ನಿಜ ವಿಷಯನ್ನು ತಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ವನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಆಂತರಿಕ ಭಿನ್ನತೆ ನಿಲ್ಲಿಸಿ ಹೋರಾಟ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ನಾಯಕ ರಮಾನಾಥ ರೈ ಅವರ ಕೈಬಲಪಡಿಸಬೇಕು ಎಂದರು.
ಯು.ಪಿ.ಎ.ಸರಕಾರದಲ್ಲಿ ಆರ್ಥಿಕ ಪರಿಸ್ಥಿತಿ ಯಲ್ಲಿ ಸುಧಾರಣೆ ಆಗಿತ್ತು. ಈಗ ಬಿಜೆಪಿ ಸರಕಾರ ಏನು ಮಾಡಿದೆ ಎಂದು ಕೇಳಬೇಕಾಗಿದೆ ಎಂದ ದಿನೇಶ್, ಯೋಜನೆಗಳು ಅನುಷ್ಠಾನ ಮಾಡಲು ಹಣ ನೀಡುತ್ತಿಲ್ಲ ಎಂದರು.
ಪಾದಯಾತ್ರೆ ಮೂಲಕ ಸಂಪರ್ಕ: ರೈ
ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರು ಸದುದ್ದೇದ್ಧೇಶದಿಂದ ಜಿಲ್ಲೆ ಅಗಮಿಸಿದ್ದಾರೆ ಎಂದು ಹೇಳಿದ ಮಾಜಿ ಸಚಿವ ಬಿ.ರಮಾನಾಥ ರೈ, ಈ ಬಾರಿಯ ಫುರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪುರಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡಿ ವ್ಯಾಪ್ತಿಯ ಶೇ. 80 ಜನರನ್ನು ಸಂಪರ್ಕ ಮಾಡವ ಮೂಲಕ ಕಾರ್ಯ ಕರ್ತರಿಗೆ ಪ್ರಚೋದನೆ ನೀಡುತ್ತಿದ್ದೇನೆ ಎಂದು ಹೇಳಿದರು. ನಾನು ವೈಯಕ್ತಿಕ ವಾಗಿ ಸಂಘಪರಿವಾರಕ್ಕೆ ಟಾರ್ಗೆಟ್ ಅಗಿದ್ದೆ. ಅ ಕಾರಣಕ್ಕೆ ನನಗೆ ಸೋಲಾಗಿದೆ. ಪುರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದ ರೈ, ಹಂತಹಂತವಾಗಿ ರಾಜಕೀಯ ಬದುಕು ಪ್ರವೇಶ ಮಾಡಿದವನು. ಸೋಲು ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ರಾಜಕೀಯ ಮಾಡಲು ತಯಾರಾಗಿದ್ದೇನೆ. ಸೋತಾಗ ನಮ್ಮ ಜೊತೆ ಯಾರು ಇರುತ್ತಾರೆ ಅವರು ಮಾತ್ರ ನೈಜ ಕಾಂಗ್ರೇಸ್.ಮಾಹಿತಿತಂತ್ರಜ್ಞಾನ ಬೆಳೆದು ನಿಂತ ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚು ಪ್ರಚಾರಗಳಿಗೆ ಗಮನಕೊಡಲು ರೈ ಸಲಹೆ ನೀಡಿದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಪರಿಷತ್ತು ಸದಸ್ಯ ಐವನ್ ಡಿಸೋಜ, ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಕ್ಷ ಪ್ರಮುಖರಾದ ಎಂ.ಎ.ಗಫೂರ್, ಪದ್ಮನಾಭ ರೈ, ಕೃಪಾ ಅಮರ್ ಆಳ್ವ, ಬಿ.ಎಚ್.ಖಾದರ್. ರಾಜಶೇಖರ ಕೋಟ್ಯಾನ್, ಸವಿತಾ ರಮೇಶ್, ವೆಂಕಪ್ಪ ಗೌಡ, ಮಾಧವ ಮಾವೆ, ಮಹಮ್ಮದ್ ನಂದಾವರ, ಪ್ರಶಾಂತ್ ಕುಲಾಲ್, ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.