ಬಂಟ್ವಾಳ

ಅಧಿಕಾರಿಗಳಿಂದ ಅವಮಾನ – ತಾಪಂ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಧರಣಿ

ಬಂಟ್ವಾಳ ತಾಪಂ ಚಾಲಕ ನಿವೃತ್ತಿಯಾದ ಬಳಿಕವೂ ಮುಂದುವರಿಯುತ್ತಿರುವುದು ಹಾಗೂ ಆ ಸ್ಥಾನಕ್ಕೆ ಹೊಸ ಚಾಲಕರ ವರ್ಗಾವಣೆ ಆದರೂ ಅದನ್ನು ಪಾಲಿಸದೇ ಇರುವುದು ಹಾಗೂ ಅಧಿಕಾರಿಗಳು ಈ ವಿಷಯದಲ್ಲಿ ತನ್ನನ್ನು ಕತ್ತಲಲ್ಲಿಟ್ಟು ಕಾರ್ಯನಿರ್ವಹಿಸುತ್ತಿರುವುದರಿಂದ ತನಗೆ ಅವಮಾನವಾಗಿದ್ದು, ಇದು ತನ್ನನ್ನು ಆಯ್ಕೆಗೊಳಿಸಿದವರನ್ನೇ ಅವಮಾನಿಸಿದಂತೆ ಎಂದು ಆರೋಪಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶುಕ್ರವಾರ ಸಂಜೆ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಧರಣಿ ಕುಳಿತರು.

ಶಾಸಕರಿಗೆ ಅವಮಾನ ಮಾಡಲಾಗಿದೆ, ಅವರ ಮನವಿಯನ್ನು ತಿರಸ್ಕರಿಸಿ ನಿವೃತ್ತ ಚಾಲಕನನ್ನು ನಿಯುಕ್ತಿಗೊಳಿಸಿರುವುದು ಸರಿಯಲ್ಲ, 20 ದಿನಗಳಲ್ಲಿ ಆತನ ಕೈಗೆ ವಾಹನವನ್ನು ಕೊಡಲಾಗಿದ್ದು, ಎಲ್ಲ ವಿಷಯಗಳ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು 28ಕ್ಕೆ ತನ್ನ ಮತ್ತು ಶಾಸಕರಿಗೆ ವಿವರಣೆ ನೀಡಬೇಕು, ಇಲ್ಲವಾದಲ್ಲಿ 29ರಂದು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.

ಇದಕ್ಕೆಲ್ಲ ಕಾರಣ ಯಾರು ಎಂದು ತಿಳಿಯಬೇಕು, ಯಾರ ಆದೇಶದ ಮೇಲೆ ತಾಪಂ ಕಚೇರಿ ನಡೆಯುತ್ತಿದೆ ಎಂದು ಗೊತ್ತಾಗಬೇಕು, ನಿವೃತ್ತ ಚಾಲಕನನ್ನು ಮುಂದುವರಿಸುವುದು ಯಾಕೆ ಎಂಬುದು ತಿಳಿಯಬೇಕು ಎಂದು ಒತ್ತಾಯಿಸಿದ ಶಾಸಕರು, ಒಂದು ಹಂತದಲ್ಲಿ ಸೋಮವಾರದವರೆಗೂ ಧರಣಿ ಕುಳಿತುಕೊಳ್ಳಲು ಸಿದ್ಧ ಎಂದು ಘೋಷಿಸದರು.

ಬಂಟ್ವಾಳ ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣರವರ ವಾಹನ ಚಾಲಕ  ಜುಲೈ 31ರಂದು ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯಿಂದ ತೆರವು ಆಗುವ ಈ ಸ್ಥಾನಕ್ಕೆ ಮಂಗಳೂರು ತಾಲೂಕು ಪಂಚಾಯಿತಿಯ ವಾಹನ ಚಾಲಕರಾಗಿದ್ದ ಮೂಲತಃ ಬಂಟ್ವಾಳದವರಗಿದ್ದು 18 ವರ್ಷಗಳಿಂದ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶೋಕ್ ಎಂಬವರ ವಿನಂತಿಯ ಮೇರೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತೆರವು ಆಗುವ ಸ್ಥಾನಕ್ಕೆ ಅಶೋಕ್ ಅವರನ್ನು ವರ್ಗಾಯಿಸುವಂತೆ ದ.ಕ.ಜಿ.ಪ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ್ದರು. ಶಾಸಕರ ಕೋರಿಕೆಯ ಮೇರೆಗೆ ತಾತ್ಕಾಲಿಕ ನಿಯೋಜನೆಯಡಿಯಲ್ಲಿ ದ.ಕ.ಜಿ.ಪ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅವರು, ಅಶೋಕ್ ಕುಮಾರ್ ಅವರನ್ನು ವರ್ಗಾಯಿಸಿ ಆದೇಶಿಸಿದ್ದು ಅಗೋಸ್ಟು 21ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಅವರಿಗೆ ಕರ್ತವ್ಯಕ್ಕೆ ಅವಕಾಶ ಕೊಡದೆ ಹಳೇ ಚಾಲಕನಿಗೇ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ ಯಾರು ಕಾರಣ ಎಂದು ತಾಪಂ ಇಒ ರಾಜಣ್ಣ ಅವರಲ್ಲಿ ಪ್ರಶ್ನಿಸಿದ ಶಾಸಕ, ಜನಪ್ರತಿನಿಧಿಯಾದ ನನಗೇ ಮೋಸ ಮಾಡಲಾಗಿದೆ. ಇದು ಶಾಸಕನಾದ ತನಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಶಾಸಕರು ಯಾರು ಎಂದು ಜನರು ಕೇಳುತ್ತಿದ್ದಾರೆ, ಯಾವುದೇ ಚುನಾಯಿತ ಜನಪ್ರತಿನಿಧಿ ಅಲ್ಲದವರು ನೀಡುವ ಆದೇಶಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಮುಖಂಡರಾದ ಎ.ಗೋವಿಂದ ಪ್ರಭು ಮತ್ತು ದೇವದಾಸ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ಇಒ ಸಂಪರ್ಕಿಸಲು ಪ್ರ ಯತ್ನಿಸಿದಾಗ ಅವರು ರಜೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಬಳಿಕ ಅಧಿಕಾರಿ ಎಂ.ವಿ.ನಾಯಕ್ ಸ್ಥಳಕ್ಕೆ ಆಗಮಿಸಿದಾಗ ಮಾತನಾಡಿದ ಶಾಸಕರು ಸ್ಪಷ್ಟನೆ ನೀಡುವಂತೆ ಕೋರಿದರು. ಕೊನೆಗೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಈ ಕುರಿತು ಆ.28ರಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಗೆ ಮತ್ತು ಶಾಸಕರಿಗೆ ಈ ಕುರಿತು ವಿವರಣೆ ನೀಡಬೇಕು ಎಂದ ಮೇಲೆ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿತು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಬಿಜೆಪಿ ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಎ.ಗೋವಿಂದ ಪ್ರಭು, ದಿನೇಶ್ ಅಮ್ಟೂರು, ಪ್ರಭಾಕರ ಪ್ರಭು, ಯಶವಂತ ಪೊಳಲಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಸುಗುಣ ಕಿಣಿ, ಪ್ರಮೋದ್ ಅಜ್ಜಿಬೆಟ್ಟು, ರಮಾನಾಥ ರಾಯಿ, ವಜ್ರನಾಥ ಕಲ್ಲಡ್ಕ, ಪುರುಷ ಎನ್. ಸಾಲ್ಯಾನ್, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಉದಯಕುಮಾರ್ ರಾವ್ ಸಹಿತ ಪಕ್ಷದ ಪ್ರಮುಖರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸತೊಡಗಿದ ಸಂದರ್ಭ ಬಂಟ್ವಾಳ ಪೊಲೀಸರು ಬಂದೋಬಸ್ತ್ ಗೆ ಬರಬೇಕಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ