ಬಂಟ್ವಾಳ

#connectustomangalore 6 ಸಾವಿರಕ್ಕೂ ಅಧಿಕ ಟ್ವೀಟ್ ಗಳು

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಹ್ಯಾಷ್ ಟ್ಯಾಗ್ ಜೊತೆ ಕನೆಕ್ಟ್ ಅಸ್ ಟು ಮ್ಯಾಂಗಲೋರ್ ಎಂಬ ಸಂದೇಶದ ಜೊತೆ ತಮಗೆ ತಿಳಿದಿರುವ ಜನಪ್ರತಿನಿಧಿ, ಅಧಿಕಾರಿಗಳನ್ನು ಸಂಪರ್ಕಿಸುವ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣದ ಅವಕಾಶಗಳನ್ನು ಒದಗಿಸುವಂತೆ ಕೋರಿ ಸಮಾನ ಮನಸ್ಕ ಸ್ನೇಹಿತರು ಆರಂಭಗೊಳಿಸಿದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಸುಮಾರು 6 ಸಾವಿರಕ್ಕೂ ಅಧಿಕ ಟ್ವೀಟ್, ರೀಟ್ವೀಟ್ ಗಳು ಈ ಅಭಿಯಾನದಲ್ಲಿ ದಾಖಲಾಗಿವೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಶಾಸಕರು, ರಾಜಕೀಯ ಪಕ್ಷಗಳ ಪ್ರಮುಖರನ್ನೂ ಅಭಿಯಾನ ಗಮನ ಸೆಳೆದದ್ದು ವಿಶೇಷ.

ಶಿರಾಡಿ ಘಾಟಿ ಸಂಚಾರವನ್ನು ಶೀಘ್ರ ಮುಕ್ತಗೊಳಿಸಿ: ಡಿವಿಎಸ್ ಸೂಚನೆ

ಕರಾವಳಿಯಲ್ಲಿರುವ ಸಾವಿರಾರು ಜನರು ಬೆಂಗಳೂರು ಮತ್ತಿತರ ಕಡೆಗೆ ತೆರಳುತ್ತಾರೆ. ನನ್ನ ಮಾಹಿತಿ ಮೂಲಗಳ ಪ್ರಕಾರ, ಶಿರಾಡಿ ಘಾಟಿಯನ್ನು ಒಂದು ವಾರದೊಳಗೆ ಸಂಚಾರಕ್ಕೆ ಮುಕ್ತಗೊಳಿಸಬಹುದು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಶೀಘ್ರ ಘಾಟಿಯನ್ನು ಮುಕ್ತಗೊಳಿಸಬೇಕು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಡಿ.ವಿ.ಸದಾನಂದ ಗೌಡ ಮನವಿ ಮಾಡಿದ್ದನ್ನು ಟ್ವೀಟ್ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಗೋಪಾಲ ಪೈ, ಸಿದ್ಧಾರ್ಥ್ ಪೈ, ನಿತಿನ್ ಹಾಗೂ ವಿಘ್ನೇಶ್ ಮತ್ತು ಸ್ನೇಹಿತರು ಜೊತೆಗೂಡಿ ಈ ಅಭಿಯಾನವನ್ನು ಆರಂಭಿಸಿದ್ದರು.

ಸಂಕಷ್ಟಕ್ಕೆಸರಕಾರದ ಸಂಬಂಧ ಪಟ್ಟ ಇಲಾಖೆಯಲ್ಲಿ ಉತ್ತಮ ಹುದ್ದೆಯಲ್ಲಿರುವವರು ಮಂತ್ರಿಗಳು, ಶಾಸಕರು ಹಾಗೂ ಸಂಸದರು ಸ್ಪಂದಿಸುವ ವಿಶ್ವಾಸದೊಂದಿಗೆ ಈ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂಬ ಸಂದೇಶಗಳೊಂದಿಗೆ ಅವರು ಅಭಿಯಾನಪೂರ್ವ ಸಂದೇಶಗಳನ್ನು ನೀಡಿದ್ದರು.

ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸಚಿವಾಲಯ, ಕೇಂದ್ರ ಭೂ ಸಾರಿಗೆ ಸಚಿವಾಲಯ, ನಿತಿನ್ ಗಡ್ಕರಿ ಅವರಿಗೆ ಟ್ವೀಟ್ ನಲ್ಲಿ ಸಂದೇಶಗಳನ್ನು ಕಳಿಸಲಾಗಿತ್ತು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಪ್ರಮುಖರಾದ ಕ್ಯಾ.ಬ್ರಿಜೇಶ್ ಚೌಟ ಅವರೂ ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸಿದ್ದು ವಿಶೇಷ.

ಯಾಕಾಗಿ ಹ್ಯಾಷ್ ಟ್ಯಾಗ್:

ಮಹಾಮಳೆಗೆ ಮಂಗಳೂರು ರಸ್ತೆಯೆಲ್ಲವೂ ಬ್ಲಾಕ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕು ಎಂದಿದ್ದರೆ ತುಂಬಾ ಕಷ್ಟ. ಕೆಲವೊಮ್ಮೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಬರುವವರೂ ಇದ್ದಾರೆ. ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಉದ್ಯೋಗ ಹಿಡಿದವರು ಊರಿಗೆ ಆಗಾಗ್ಗೆ ಬಂದು ಹೋಗುತ್ತಲಿರುತ್ತಾರೆ. ಬೆಂಗಳೂರಿನಲ್ಲಿರುವವರೆಲ್ಲರೂ ಕೈತುಂಬಾ ಸಂಬಳದಲ್ಲಿರುವವರೇನಲ್ಲ. ಹೀಗಾಗಿ ಇರುವ ರಸ್ತೆಯನ್ನಾದರೂ ಸುಸ್ಥಿತಿಯಲ್ಲಿ ಇರಿಸಲು ಸರಕಾರ ಮುಂದಡಿ ಇಡಬೇಕು. ಇದಕ್ಕೆ ನಾನಾ ಮಾರ್ಗಗಳಿವೆ. ಮನವಿಪತ್ರಗಳನ್ನು ಹಿಡಿದು ಶಾಸಕರು, ಸಂಸದರ ಬಳಿ ಹೋಗುವ ಪ್ರಕ್ರಿಯೆಗಳೂ ನಡೆಯುತ್ತವೆ. ಆದರೆ ನಾವು ಆರಿಸಿಕೊಂಡದ್ದು ಟ್ವಿಟ್ಟರ್. ಹ್ಯಾಷ್ ಟ್ಯಾಗ್ ಹಾಕಿ ಗಮನ ಸೆಳೆಯುವ ಟ್ರೆಂಡ್ ಈಗ ಜನಪ್ರಿಯ. ಈಗಿನ ಕೇಂದ್ರ ಮಂತ್ರಿಮಂಡಲದ ಸದಸ್ಯರು ಅಂತರ್ಜಾಲ ಮಾಧ್ಯಮದಲ್ಲಿ ಬರುವ ಮನವಿಗಳಿಗೆ ಸ್ಪಂದಿಸುತ್ತಾರೆ. ರಾಜ್ಯ ಸರಕಾರವೂ ಸ್ಪಂದಿಸುತ್ತಿದೆ. ಮಂಗಳೂರಿಗರು ಇದನ್ನು ಬೆಂಬಲಿಸಿ ಅಭಿಯಾನ ಕೈಗೊಂಡರೆ, ಸರಕಾರದ ಗಮನ ಸೆಳೆಯಲು ಸಾಧ್ಯ ಎನ್ನುತ್ತಾರೆ ಗೋಪಾಲ ಪೈ ಮಾಣಿ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ