ಮಧ್ಯವರ್ತಿಗಳಿಗೆ ತಡೆ, ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ, ಬಂಟ್ವಾಳ, ಬಿ.ಸಿ.ರೋಡಿಗೆ ಹೊಸರೂಪ. ಇದು ಬಿಜೆಪಿ ಸಂಕಲ್ಪ.
ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಪುರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಬಳಿಕ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬಿಜೆಪಿ ಆಡಳಿತ ಬಂದರೆ ಕೈಗೊಳ್ಳಬಹುದಾದ ಯೋಜನೆಗಳನ್ನು ವಿವರಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ನಾಗರಿಕರ ಸಹಭಾಗಿತ್ವದಲ್ಲಿ ಕಾರ್ಯ ಪಡೆಯನ್ನು ರಚಿಸಿ ಸ್ವಚ್ಚ ಪುರಸಭೆಗೆ ಶ್ರಮಿಸುವುದು,ಸಮಗ್ರ ಒಳಚರಂಡಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಆಯ್ದ ಭಾಗಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪಿಸಿ, ಸಂಸ್ಕರಿಸಿದ ನೀರನ್ನು ಸಾರ್ವಜನಿಕ ಉದ್ಯಾನವನಕ್ಕೆ ಪೂರೈಕೆ ಮಾಡುವುದು, ಪುರವಾಸಿಗಳಿಗೆ ಶುದ್ದ ಕುಡಿಯುವ ನೀರಿನ ಪೂರೈಕೆ, ಪ್ಲಾಸ್ಟಿಕ್ ಮುಕ್ತ ಪುರಸಭೆ,3 ತಿಂಗಳಿಗೊಮ್ಮೆ ವಾಡ್೯ ಸಭೆ, ಪ್ಲೆಕ್ಸ್, ಹೋರ್ಡಿಂಗ್ ಮುಕ್ತ ಪುರಸಭೆ, ವ್ಯವಸ್ಥಿತ ವಾಹನ ಪಾರ್ಕಿಂಗ್ ವ್ಯವಸ್ಥೆ, ಪುರಸಭೆಯ ಆದಾಯ ಹೆಚ್ಚಿಸಲು ವಸತಿ ಸಂಕೀರ್ಣಗಳ ನಿರ್ಮಾಣ, ಸಿಸಿ ಕ್ಯಾಮರ ಅಳವಡಿಸಿ ಕಾನೂನು ಸುವ್ಯವಸ್ಥೆ ಹಾಗೂ ಸ್ವಚ್ಚತೆಯ ಪಾಲನೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಅನುಪ್ಠಾನಕ್ಕೆ ತಂದಿರುವ ತ್ಯಾಜ್ಯ ಸಂಸ್ಕರಣ ಘಟಕವನ್ನು ಬಿಜೆಪಿ ಆಡಳಿತಕ್ಕೆ ಬಂದರೆ ಮರುಸ್ಥಾಪಿಸುವುದಾಗಿ ಪ್ರಶ್ನೆಯೊಂದಕ್ಕೆ ದೇವದಾಸ ಶೆಟ್ಟಿ ಉತ್ತರಿಸಿದರು.
ಈ ಹಿಂದೆ ಆರೋಗ್ಯ ಮತ್ತು ಪರಿಸರ ಸಚಿವರು ಜಿಲ್ಲೆಯವರೇ ಆಗಿದ್ದರೂ ಇಚ್ಚಾಶಕ್ತಿಯ ಕೊರತೆಯಿಂದ ಘಟಕದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದ ಅವರು, ಘಟಕ ಸ್ಥಾಪಿಸುವಂತೆ ಸು.ಕೋ.ಹಾಗೂ ಸದನ ಸಮಿತಿಯ ಆದೇಶದಂತೆ ವೈಜ್ಙಾನಿಕ ಮತ್ತು ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದರು.
ಬಿ.ಸಿ.ರೋಡಿನ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರು ವೃತ್ತ ನಿರ್ಮಿಸಿ ಎಲ್ಲಾ ಸರಕಾರಿ ಬಸ್ ಪ್ರವೇಶಿಸುವಂತೆ ಮಾಡುವ ಮೂಲಕ ನಿರುಪಯುಕ್ತ ನಿಲ್ದಾಣವನ್ನು ಜನೋಪಯನ್ನಾಗಿ ರೂಪಿಸುವುದು. ಬಿ.ಸಿ.ರೋಡನ್ನು ಸೌಂದರ್ಯಕರಣಗೊಳಿಸಿ ಹಸುರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದ ಅವರು ಈ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಈಗಾಗಲೇ ಯೋಜನೆಯನ್ನು ರೂಪಿಸಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಸೀತಾರಾಮ ಪೂಜಾರಿ, ರಂಜಿತ್ ಮೈರ, ಪುರುಷೋತ್ತಮ ಶೆಟ್ಟಿ ,ಗಣೇಶ್ ದಾಸ್ ಅಭ್ಯರ್ಥಿಗಳಾದ ಗೋವಿಂದಪ್ರಭು, ದಿನೇಶ್ ಭಂಡಾರಿ, ಪುಷ್ಪರಾಜ ಶೆಟ್ಟಿ, ಮಹೇಶ್ ಶೆಟ್ಟಿ ಮೊದಲಾದವರಿದ್ದರು.