ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆ ಸೋಮವಾರ ಸಂಜೆ ನಡೆಯಿತು.
ಸಂಸದ ನಳಿನ್‌ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ , ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಹಿರಿಯ ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ , ಬಿಜೆಪಿ ನಾಯಕರಾದ ಜಿ.ಆನಂದ, ದೇವದಾಸ ಶೆಟ್ಟಿ, ಸುಲೋಚನಾ ಭಟ್, ಕೆ. ಸುಗುಣ ಕಿಣಿ, ವಜ್ರನಾಥ ಕಲ್ಲಡ್ಕ, ಮತ್ತಿತರರು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು. ಪಕ್ಷದ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ನನ್ನ ರಾಜಕೀಯ ಕ್ಷೇತ್ರದ ಪ್ರವೇಶಕ್ಕೆ ಅಟಲ್‌ಜೀಯಂತಹ ಮಹಾನ್ ನಾಯಕರು ಪ್ರೇರಣೆಯಾಗಿದ್ದು ಅಟಲ್ ಜೀಗೆ ಅಟಲ್ ಜೀಯವರೆ ಸಾಟಿ ಎಂದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮನ್ನಗಲಿದರೂ ಅವರ ನೆನಪು, ಅವರು ಹಾಕಿಕೊಟ್ಟ ದಾರಿ ಅಜರಾಮರ ಎಂದು ಉಳಿಪ್ಪಾಡಿ ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ವಾಜಪೇಯಿಯವರು ವಿಶ್ವನಾಯಕ. ಮನುಷ್ಯ ಬದುಕಿರುವಾಗ ಸಾಯಬಾರದು, ಸತ್ತ ಮೇಲೆಯೂ ಬದುಕಿರ ಬೇಕು ಎನ್ನುವ ರೀತಿಯ ಆದರ್ಶ ಜೀವನ ನಡೆಸಿದವರು, ಆಧ್ಯಾತ್ಮ ಹಿನ್ನೆಲೆಯನ್ನು ಮೈಗೂಡಿಸಿಕೊಂಡ ವಾಜಪೇಯಿ ನಿಜ ಅರ್ಥದ ಅಜಾತಶತ್ರು ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ ಮಾತನಾಡಿ ವಾಜಪೇಯಿ ಅಗಲುವಿಕೆ ನಿರ್ವಾತವನ್ನು ನಿರ್ಮಿಸಿದೆ. 15 ವರ್ಷ ಸಕ್ರಿಯ ರಾಜಕಾರಣದಲ್ಲಿ ಅವರು ಇಲ್ಲದಿದ್ದರೂ ಕೂಡ ದೇಶದ ಜನತೆ ಅವರ ನಿಧಾನಕ್ಕೆ ಸ್ಪಂದಿಸಿದ ರೀತಿ ಅವರ ಮೇಲೆ ಇದ್ದ ಗೌರವವನ್ನು ಪ್ರತಿ ಬಿಂಬಿಸುತ್ತದೆ ಎಂದರು. ಜಾತಿ, ಪಂಥ, ಪಕ್ಷವನ್ನು ಮೀರಿ ವಿಶ್ವ ಭ್ರಾತೃತ್ವವನ್ನು ಸಾರಿದ ನಾಯಕರಾಗಿದ್ದ ವಾಜಪೇಯಿ ಅಧಿಕಾರಕ್ಕಿಂತ ಪ್ರಜಾಪ್ರಭುತ್ವದ ಮೌಲ್ಯವೇ ಶ್ರೇಷ್ಠ ಎಂದು ತೋರಿಸಿಕೊಟ್ಟವರು, ಸಾಂಸ್ಕೃತಿಕ ರಾಷ್ಟ್ರವಾದದ ಚಿಂತನೆಯೊಂದದಿಗೆ ಮುನ್ನಡೆದವರು ಎಂದರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಹಿರಿಯ ಸಹಕಾರಿ ಧುರೀಣ ಬಿ.ಟಿ.ನಾರಾಯಣ ಭಟ್ ವಾಜಪೇಯಿವವರೊಂದಿಗಿನ ಒಡನಾಟವನ್ನು ಸ್ಮರಿಸಿದರು.