ಭಾನುವಾರ ಬೆಳಗ್ಗೆ ನೇತ್ರಾವತಿ ನೀರಿನ ಮಟ್ಟ 7.6 ಮೀಟರ್ ಎತ್ತರದಲ್ಲಿದ್ದರೂ ಕಳೆದ ವಾರ ಇದ್ದಂಥ ಆತಂಕ ಬಂಟ್ವಾಳದಲ್ಲಿ ಕಡಿಮೆಯಾಗಿದೆ. ಶನಿವಾರ ದಿನವಿಡೀ ಬಿಸಿಲು ಕಾಣಿಸಿಕೊಂಡು, ರಾತ್ರಿ ಮಳೆ ಸುರಿದರೆ, ಭಾನುವಾರ ಬೆಳಗ್ಗೆ ಸಣ್ಣದಾಗಿ ಮಳೆಯಾಗುತ್ತಿದೆ. ಒಟ್ಟಾರೆಯಾಗಿ ನೇತ್ರಾವತಿಯಲ್ಲಿ ಪ್ರವಾಹದ ಅಬ್ಬರ ಕಡಿಮೆಯಾಗಿದೆ. ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ.
ಶನಿವಾರ ಸಂಜೆಯ ವೇಳೆಗೆ ನೇತ್ರಾವತಿ ನದಿಯ ಪಾತ್ರದೊಳಗೆ ನೀರು ಹರಿಯುತ್ತಿದ್ದು, ನೀರಿನ ಮಟ್ಟ 6.8 ಮೀ.ಎತ್ತರದಲ್ಲಿತ್ತು. ನೆರೆಯಿಂದ ಜಲಾವೃತಗೊಂಡಿದ್ದ ನದಿತೀರದ ತಗ್ಗು ಪ್ರದೇಶಗಳಾದ ಪಾಣೆಮಂಗಳೂರಿನ ಗೂಡಿನಬಳಿ, ಆಲಡ್ಕ, ಬಂಟ್ವಾಳದ ಜಕ್ರಿಬೆಟ್ಟು, ಬಡ್ಡಕಟ್ಟೆ, ಬಸ್ತಿಪಡ್ಪು, ಕಂಚಿಕಾರಪೇಟೆ, ನಾವೂರು, ಬ್ರಹ್ಮರಕೊಟ್ಲು, ತಲಪಾಡಿ ಮೊದಲಾದೆಡೆಯಲ್ಲಿ ನೀರು ಪೂರ್ಣಪ್ರಮಾಣದಲ್ಲಿ ಇಳಿಮುಖವಾಗಿದೆ.
ನೀರಿನಿಂದ ಮುಳುಗಡೆಯಾದ ಹಿನ್ನಲೆಯಲ್ಲಿ ಗಂಜಿಕೇಂದ್ರ, ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದ ನಿರಾಶ್ರಿತರು ಶನಿವಾರ ಮರಳಿ ಸ್ವಸ್ಥಾನಕ್ಕೆ ತೆರಳಿದ್ದಾರೆ.
ಕಳೆದ ಒಂದು ವಾರದಿಂದ ನೆರೆ ಪರಿಹಾರಕಾರ್ಯದಲ್ಲಿ ನಿರತರಾಗಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಂದಾಯಾಧಿಕಾರಿಗಳ ತಂಡ ಹಾಗೂ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತವರ ಸಿಬ್ಬಂದಿಯ ತಂಡ ಸದ್ಯ ನಿಟ್ಟುಸಿರು ಬಿಟ್ಟಿದೆ.
ವಾರದ ಸುದೀರ್ಘ ರಜೆಯ ಬಳಿಕ ಶನಿವಾರ ಶಾಲೆಗಳು ಆರಂಭಗೊಂಡವು. ನಿರಾಶ್ರಿತರಿಗೆ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್,ಬಂಟ್ವಾಳ ಪ್ರವಾಸಿಮಂದಿರ ಹಾಗೂ ಬಿ.ಮೂಡಗ್ರಾಮದ ನಂದರಬೆಟ್ಟುವಿನಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿತ್ತು.
ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ನೇತೃತ್ವದ ಸಿಬಂದಿಗಳ ತಂಡ ಈ ಗಂಜಿಕೇಂದ್ರದ ಸಂಪೂರ್ಣ ಹೊಣೆ ಹೊತ್ತು ನಿರಾಶ್ರಿತರಿಗೆ ಸಕಲ ವ್ಯವಸ್ಥೆ ಮಾಡಿತ್ತು.
ಪ್ರವಾಹದ ಸಂದರ್ಭದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆಮತ್ತು ಕಂದಾಯಾಧಿಕಾರಿಗಳನೊಳಗೊಂಡ ತಂಡದ ಹಾಗೂ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮತ್ತವರ ಸಿಬಂದಿಗಳ ತಂಡ ಕೈಗೊಂಡ ತುರ್ತು ಕಾರ್ಯ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.
ಬಂಟ್ವಾಳದಾದ್ಯಂತ ಬಂದಿರುವ ಪ್ರವಾಹದಿಂದ ಯಾವುದೇ ಸಾವು,ನೋವುಗಳ ಸಂಭವಿಸಲಿಲ್ಲ.ಆದರೆ ಗಾಳಿ,ಮಳೆಗೆ ಕೆಲ ಮನೆಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.