ಪುರಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ನೇತ್ರಾವತಿ ನದಿಯಲ್ಲಿ ಕಳೆದ ವಾರ ಸುರಿದ ಮಳೆ, ಪ್ರವಾಹದಿಂದಾಗಿ ಸುಮಾರು 2.5 ಕೋಟಿ ರೂಗಳಷ್ಟು ಹಾನಿ ಸಂಭವಿಸಿದೆ.
ಈ ಭಾಗದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಮನೆ ಮತ್ತು ಅಂಗಡಿಗಳಿಗೆ ನೆರೆಎ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇಲ್ಲಿನ ಬಹುತೇಕ ರಸ್ತೆಗಳಿಗೆ ನೆರೆ ನೀರು ನುಗ್ಗಿದ ಪರಿಣಾಮ ರಸ್ತೆ ಮಾತ್ರವಲ್ಲದೆ ಕುಡಿಯುವ ನೀರು, ಕಾಲು ಸಂಕ, ತಡೆಗೋಡೆ, ಮನೆ ಮತ್ತು ಆವರಣಗೋಡೆ ಹೀಗೆ ಒಟ್ಟು ರೂ ೨.೫ಕೋಟಿ ಮೊತ್ತದ ನಷ್ಟ ಸಂಭವಿಸಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿನ ಬಿ.ಮೂಡ ಗ್ರಾಮದ ಗೂಡಿನಬಳಿ, ತಲಪಾಡಿ, ನಂದರಬೆಟ್ಟು, ಬಿ.ಕಸ್ಬಾ ಗ್ರಾಮದ ಬಡ್ಡಕಟ್ಟೆ, ಬಸ್ತಿಪಡ್ಪು, ಜಕ್ರಿಬೆಟ್ಟು, ಪಾಣೆಮಂಗಳೂರು ಫಿರ್ಕಾ ವ್ಯಾಪ್ತಿಯ ಆಲಡ್ಕ, ಬಂಗ್ಲೆಗುಡ್ಡೆ, ಅಕ್ಕರಂಗಡಿ, ಬೋಗೋಡಿ, ಜೈನರಪೇಟೆ ಮತ್ತಿತರ ಕಡೆಗಳಲ್ಲಿ ನೆರೆ ನೀರು ನುಗ್ಗಿದೆ. ಈ ಪೈಕಿ ನಂದರಬೆಟ್ಟು ಎಂಬಲ್ಲಿ ಒಟ್ಟು ೧೯ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅಲ್ಲಿನ ಸುಮಾರು 250 ಮಂದಿಗೆ ಸ್ಥಳೀಯ ಖಾಲಿ ಮನೆಯೊಂದರಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಉಳಿದಂತೆ ತಲಪಾಡಿ ಮತ್ತು ಬಂಟ್ವಾಳ ನಿರೀಕ್ಷಣಾ ಮಂದಿರಲ್ಲಿ ತೆರೆಯಲಾಗದ ಗಂಜಿ ಕೇಂದ್ರಗಳಿಗೆ ಊಟ ಮತ್ತು ಉಪಹಾರ ಒದಗಿಸಿದೆ. ನಂದರಬೆಟ್ಟು ಪ್ರದೇಶದಲ್ಲಿ ಅಂದು ರಾತ್ರಿ ಧ್ವನಿವರ್ಧಕ ಮೂಲಕ ನಾಗರಿಕರನ್ನು ಎಚ್ಚರಿಸಲಾಗಿದ್ದು, ನಗರ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ಅಗ್ನಿಶಾಮಕ ದಳ ಸಹಾಯಕ ಠಾಣಾಧಿಕಾರಿ ರಾಜೀವ್ ನೇತೃತ್ವದ ತಂಡವು ದೋಣಿ ಧಾವಿಸಿ ಬಂದು ಸ್ಥಳೀಯರ ಸಹಕಾರ ಪಡೆದು ವೇಳೆ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದೆ. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಹಾಯಕ ಎಂಜಿನಿಯರ್ ಇಕ್ಬಾಲ್ ಮತ್ತಿತರರು ಪಾಲ್ಗೊಂಡಿದ್ದರು ಎಂದು ಅವರು ವಿವರಿಸಿದ್ದಾರೆ.