ಬಂಟ್ವಾಳ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದ್ದು ಬಿಸಿಲು ಇಣುಕಿದೆ. 8.8 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ನೆರೆ ಇಳಿಯುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇದೇ ವೇಳೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣ ಆಚಾರ್ಯ, ಪ್ರಧಾನ ಸಿವಿಲ್ ನ್ಯಾಯಧೀಶರಾದ ಪ್ರಧಾನ ಸಿವಿಲ್ ನ್ಯಾಯಾಧೀಶ ಎ.ಜಿ.ಗಂಗಾಧರ ಮತ್ತು ಮಲ್ಲನಗೌಡ ಪ್ರತ್ಯೇಕವಾಗಿ ಭೇಟಿ ನೀಡಿದರು.
ಈಗಾಗಲೇ ಜಿಲ್ಲಾಡಳಿತ ನೆರೆ ಪೀಡಿತ ಪ್ರದೇಶಗಳ ಜನರಿಗೆ ತಾತ್ಕಾಲಿಕ ಬದಲಿ ವ್ಯವಸ್ಥೆ ಕಲ್ಲಿಸಿದ್ದಾರೆ. ಇಲ್ಲಿನ ಜನರಿಗೆ ಯಾವುದೇ ಸಮಸ್ಯೆ ಗಳು ಬರದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ. ಮಳೆ ಕ್ಷೀಣಿಸಿದ ನಂತರವೇ ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಎಂದು ಸಚಿವ ಖಾದರ್ ಈ ಸಂದರ್ಭದಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ತಹಶಿಲ್ದಾರ್ ಪುರಂದರಹೆಗ್ಡೆ, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ವಾರ್ತಾಧಿಕಾರಿ ಖಾದರ್ ಶಾ, ಸಿದ್ದೀಕ್ ಬೋಗೋಡಿ, ರಪೀಕ್ ಮೊದಲಾದವರು ಖಾದರ್ ಜತೆಗಿದ್ದರು.
ತುಂಬೆ ಡ್ಯಾಂ ವೀಕ್ಷಣೆಗೆ ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ ಆಗಮಿಸಿದ್ದು, ಪೂರಕ ಮಾಹಿತಿ ಪಡೆದರು. ಬಂಟ್ವಾಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೆಸ್ಕಾಂ ವಿದ್ಯುತ್ ನಿಲುಗಡೆಗೊಳಿಸಿರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಸುದ್ದಿಗಾರರಿಗೆ ಈ ಸಂದರ್ಭ ಹೇಳಿದರು. ತುಂಬೆ ವೆಂಟೆಡ್ ಡ್ಯಾಮ್ ಸಮೀಪ ಹಿನ್ನೀರು ಪ್ರದೇಶದಲ್ಲಿ ಬಂಟ್ವಾಳ ಸಬ್ ಸ್ಟೇಶನ್ ನಿಂದ ತುಂಬೆ ಪಂಪ್ ಹೌಸ್ ಗೆ 33 ಕೆವಿ ವಿದ್ಯುತ್ ಲೈನ್ ಎಳೆಯಲಾಗಿದೆ. ನೇತ್ರಾವತಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾದ ಕಾರಣ ವಿದ್ಯುತ್ ಸರಬರಾಜು ನಿಲ್ಲಿಸಲಾಯಿತು. ಇದರಿಂದ ತುಂಬೆಯಲ್ಲಿ ಪಂಪಿಂಗ್ ಸಾಧ್ಯವಾಗದೆ ಗುರುವಾರ ನಗರಕ್ಕೆ ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಯಿತು ಎಂದು ಮೇಯರ್ ವಿವರಿಸಿದರು.
ಗುರುವಾರ ಬೆಳಗಿನ ಜಾವ 9 ಮೀಟರ್ ತಲುಪಿ, ಸಂಜೆಯ ವೇಳೆ 10.2 ಮೀಟರ್ ಆಗಿತ್ತು. ತಗ್ಗು ಪ್ರದೇಶಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಪಾಣೆಮಂಗಳೂರಿನ ಆಲಡ್ಕ ಸಹಿತ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಹರಿದಿದ್ದು, ಸ್ಥಳೀಯರು ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ನೀರಿನ ಮಟ್ಟ 10.65ಕ್ಕೆ ಏರತೊಡಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಮಹಾಪೂರವೇ ಹರಿದುಬಂದಿತ್ತು.
ಆದರೆ ಶುಕ್ರವಾರ ಬೆಳಗ್ಗಿನ ಜಾವವೇ ನದಿ ನೀರು ಇಳಿಮುಖವಾಯಿತು. ಮಧ್ಯಾಹ್ನದ ವೇಳೆಗೆ 8.8 ಮೀಟರ್ ನಲ್ಲಿ ನೇತ್ರಾವತಿ ಹರಿಯುತ್ತಿದ್ದು, ಅಪಾಯದ ಮಟ್ಟಕ್ಕಿಂತ ಕಡಿಮೆಯಾಗುತ್ತಿದೆ. ಈಗಾಗಲೇ ಶಾರದಾ ಹೈಸ್ಕೂಲು, ಬಂಟ್ವಾಳ ಐಬಿಗಳಲ್ಲಿರುವ ಗಂಜಿ ಕೇಂದ್ರಗಳ ಸಂತ್ರಸ್ತರಿಗೆ ಆಡಳಿತ ಊಟ, ವಸತಿ ವ್ಯವಸ್ಥೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಅವರು ಮನೆಗೆ ಮರಳಲಿದ್ದಾರೆ. ಜನರಿಗೆ ತೊಂದರೆ ಆಗದಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚನೆ ನೀಡಿದ್ದು, ಗಂಜಿಕೇಂದ್ರಗಳನ್ನು ವೀಕ್ಷಿಸಿದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಾಕೃತಿಕ ವಿಕೋಪ ವಿಭಾಗ ಅಧಿಕಾರಿ ವಿಷುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
YESTERDAY’s NEWS