ಒಂದು ದಿನದ ಬಿಡುವಿನ ಬಳಿಕ ಮತ್ತೆ ಬಂಟ್ವಾಳದ ತಗ್ಗು ಪ್ರದೇಶಗಳಲ್ಲಿ ನದಿ ತೀರದ ರಸ್ತೆಗಳಲ್ಲಿ ನೇತ್ರಾವತಿ ನದಿ ನೀರು ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಗುರುವಾರ ಬೆಳಗ್ಗೆ ಎಂದಿನಂತೆಯೇ ಸಮೀಪದ ಶಾಲೆಗಳಿಗೆ ಹೊರಟ ಮಕ್ಕಳು ಮೆಟ್ಟಿಲಿಳಿಯುವ ಹೊತ್ತಿನಲ್ಲಿ ಭಾರಿ ಮಳೆ ಎದುರಾಗಿದ್ದು, ಇದೇ ಹೊತ್ತಿಗೆ ಮುಂಜಾಗರೂಕತಾ ಕ್ರಮವಾಗಿ ಶಾಲೆಗಳಿಗೆ ತಹಶೀಲ್ದಾರ್ ಪುರಂದರ ಹೆಗ್ಡೆ ರಜೆ ಘೋಷಿಸಿದ್ದಾರೆ. ಆದರೆ ಕಾಲೇಜುಗಳಿಗೆ ರಜೆ ಇದೆಯೋ ಇಲ್ಲವೋ ಎಂಬ ಗೊಂದಲದಲ್ಲಿಯೇ ಪದವಿ ವಿದ್ಯಾರ್ಥಿಗಳು ಕಾಲೇಜು ತಲುಪುತ್ತಿದ್ದಾರೆ.
ಸೋಮವಾರ, ಮಂಗಳವಾರ ಬಂಟ್ವಾಳ, ಪಾಣೆಮಂಗಳೂರಿನ ನದಿ ತೀರದ ರಸ್ತೆಗಳಿಗೆ ನುಗ್ಗಿ ಜನಜೀವನಕ್ಕೆ ತೊಂದರೆ ಉಂಟು ಮಾಡಿದ್ದ ನೇತ್ರಾವತಿ ನದಿ ನೀರು ಆಗಸ್ಟ್ 15ರಂದು ಇಳಿದಿತ್ತು. 10.4 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ ನಿನ್ನೆ 7ರಿಂದ 8 ಮೀಟರ್ ಆಸುಪಾಸಿನಲ್ಲೇ ಇತ್ತು. ಆದರೆ ಗುರುವಾರ ಬೆಳಗ್ಗೆ ಮತ್ತೆ ಏರಿಕೆ ಕಂಡಿದ್ದು, ಅಪಾಯದ ಮಟ್ಟಕ್ಕೆ (9 ಮೀಟರ್) ಬಂದಿದೆ.
ಪ್ರತಿಭಾ ಕಾರಂಜಿಯ ತಾಲೂಕು ಮಟ್ಟದ ಕಾರ್ಯಕ್ರಮವೊಂದು ಸಿದ್ಧಕಟ್ಟೆಯಲ್ಲಿ ನಡೆಯಲು ಉದ್ದೇಶಿಸಲಾಗಿದ್ದು, ಮಳೆ ಇರುವ ಕಾರಣ ಇದನ್ನು ಮುಂದೂಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ಅಧಿಕಾರಿಗಳು ಇದ್ದಾರೆ. ಮಳೆಯಿಂದಾಗಿ ವಿದ್ಯುತ್ ಪೂರೈಕೆಯೂ ಆಗಾಗ ಸ್ಥಗಿತಗೊಳ್ಳುತ್ತಿದ್ದು, ಬಂಟ್ವಾಳದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.