ಸಂಜೆ 5 ಗಂಟೆ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ ಬಂಟ್ವಾಳದಲ್ಲಿ 10.4 ಇತ್ತು. ಬೆಳಗ್ಗಿನಿಂದ ಸುರಿಯುತ್ತಿದ್ದ ಮಳೆ ಸಂಜೆಯ ವೇಳೆಗೆ ಬಿಡುವು ಮಾಡಿಕೊಂಡಿದೆ. ಆದರೆ 10.4 ಮೀಟರ್ ಮಟ್ಟದಲ್ಲಿ ನದಿ ಕಳೆದ ನಾಲ್ಕು ದಿನಗಳಿಂದ ಹಗಲಿನ ವೇಳೆಯಲ್ಲಿ ಇರಲಿಲ್ಲ. ಹೀಗಾಗಿ ರಾತ್ರಿ ವೇಳೆ ಮತ್ತೇನಾದರೂ ಪ್ರಾಕೃತಿಕ ವೈಪರೀತ್ಯವಾದರೆ, ನದಿ ನೀರಿನಲ್ಲಿ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಈಗಾಗಲೇ ತಗ್ಗು ಪ್ರದೇಶಗಳಲ್ಲಿದ್ದವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಗಮನಾರ್ಹ ಅಂಶವೆಂದರೆ ಯಾವಾಗಲೂ ನದಿ ನೀರು ಉಕ್ಕಿ ಹರಿಯುವ ಜಾಗಗಳಲ್ಲೇ ಈ ಬಾರಿಯೂ ನೆರೆ ಬಂದಿರುವುದು ಹೊಸದಾದ ಜಾಗವನ್ನು ಆಕ್ರಮಿಸಿಕೊಂಡದ್ದು ಕಡಿಮೆ. ಆದರೂ ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡವಿನ ಬಾಗಿಲು ಕೊಪ್ಪಳ ಎಂಬಲ್ಲಿ ಎಂಟು ಮನೆಗಳ ಸುತ್ತ ನೀರು ತುಂಬಿಕೊಂಡಿದೆ.
ಮನೆಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು ಸ್ಥಳೀಯರ ನೆರೆವಿನೊಂದಿಗೆ ಮನೆಯಲ್ಲಿದ್ದ ವಸ್ತುಗಳನ್ನು ಬೇರೆಡೆ ಸಾಗಿಸಲಾಗಿದೆ. ಗುಲಾಬಿ, ಜಗನ್ನಾಥ ಸುಂದರ ಮೂಲ್ಯ, ಜಗನ್ನಾಥ ಹಂಝ, ವಿಶ್ವನಾಥ, ಕೇಶವ, ಅಬ್ದುಲ್ ಮುತ್ತಾಲಿಬ್ ವಸಂತ ಮೊದಲಾದವರ ಮನೆಗಳು ಜಲಾವೃತ್ತಗೊಂಡಿದೆ. ಇಲ್ಲಿನ ಅನೇಕ ಅಡಿಕೆ ತೋಟ ಹಾಗೂ ಗದ್ದೆಗಳಲ್ಲಿ ನೆರೆ ನೀರು ತುಂಬಿಕೊಂಡು ಕೃಷಿ ಹಾನಿ ಉಂಟಾಗಿದೆ. ವಿಪರೀತ ಮಳೆಯಿಂದ ಮನೆ ಕುಸಿತದಿಂದ ಕಂಗೆಟ್ಟ ಮಣಿಹಳ್ಳ ಸಮೀಪದ ಕೊಂಗ್ರಬೈಲು ನಿವಾಸಿಗಳಾದ ಅಣ್ಣುಮೂಲ್ಯ ಕುಟುಂಬ ವನ್ನು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತನ್ನ ವಾಹನದಲ್ಲಿ ಕರೆದಂದು, ಹಳೇ ಐಬಿಯಲ್ಲಿರುವ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.
ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮಧ್ಯಾಹ್ನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ ಜತೆಗಿದ್ದರು.