ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ ವಿರಾಮ ಪಡೆಯಿತು. ಅದೇ ರೀತಿ ಘಟ್ಟದ ತಪ್ಪಲಲ್ಲೂ ಮಳೆ ಇಳಿಮುಖವಾಗಿ ನೀರಿನ ಹರಿವು ಕೊಂಚ ಕಡಿಮೆಯಾದ ಕಾರಣ ಬಂಟ್ವಾಳದಲ್ಲಿ ಅಪಾಯದ ಮಟ್ಟ ಮೀರಿ (10.4 ಮೀಟರ್ ) ಹರಿಯುತ್ತಿದ್ದ ನೇತ್ರಾವತಿ ನದಿ ಬುಧವಾರ ಬೆಳಗ್ಗೆ ಇಳಿಮುಖವಾಯಿತು. ಬೆಳಗ್ಗಿನ ಹೊತ್ತಿಗೆ 9.6ರ ಆಸುಪಾಸಿಗೆ ಹರಿಯುತ್ತಿದ್ದ ನದಿ, ಮಧ್ಯಾಹ್ನದ ವೇಳೆಗೆ 8.5 ಮೀಟರ್ ಎತ್ತರದಲ್ಲಿ ಹರಿತಯುತ್ತಿತ್ತು.
ಸಂಜೆಯ ವೇಳೆ ತುಂತುರು ಮಳೆ ಗಾಳಿಯೊಂದಿಗೆ ಬೀಸುತ್ತಿದ್ದು, ಯಾವುದೇ ಅಪಾಯ ಸಂಭವಿಸಿದರೆ, ತಾಲೂಕು ಆಡಳಿತ ಎದುರಿಸಲು ಸನ್ನದ್ಧವಾಗಿದೆ. ಮಂಗಳವಾರ ರಾತ್ರಿ ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ್ದೇವೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಈಗಾಗಲೇ ಮೂರು ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಶಾರದಾ ಪ್ರೌಢಶಾಲೆ, ಹಳೇ ಐಬಿ ಮತ್ತು ನಾವೂರುಗಳಲ್ಲಿ ಗಂಜಿಕೇಂದ್ರವಿದ್ದು, ತಾಲುಕು ಆಡಳಿತ ಸಕಲ ನೆರವು ನೀಡಲು ತಯಾರಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆದರೂ ಬಂಟ್ವಾಳ ಪ್ರದೇಶದ ನದಿ ತೀರದ ಜಾಗಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಆಲಡ್ಕ, ಕಂಚಿಕಾರಪೇಟೆಗಳಲ್ಲಿ ನದಿಯಿಂದ ನೀರು ತೀರಪ್ರದೇಶಗಳ ಪಕ್ಕದಲ್ಲೇ ಹರಿಯುತ್ತಿದ್ದು, ಮತ್ತೆ ಗಾಳಿ ಮಳೆ ಶುರುವಾದರೆ ಸಮಸ್ಯೆ ಉಂಟಾಗಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.