ನಮ್ಮ ಕೈಗಳನ್ನು ಸ್ವಚ್ಛ ಮನಸ್ಸಿನ ಪ್ರಚೋದನೆಗೆ ಒಳಗಾಗಿಸಿದರೆ ಅವುಗಳು ಮಾಡುವ ಕಾರ್ಯಗಳೂ ಸ್ವಚ್ಛವಾಗಿಯೇ ಇರುತ್ತದೆ. ಈ ನೆಲೆಯಿಂದ ಮಾತ್ರ ಸ್ವಚ್ಛತಾ ಅಭಿಯಾನ ಯಶಸ್ಸನ್ನು ಕಾಣಲು ಸಾಧ್ಯವಿದೆ ಎಂದು ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ಹೇಳಿದರು.
ಪಾಣೆಮಂಗಳೂರಿನ ಎಸ್ ಎಲ್ ಎನ್ ಪಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಮಂಗಳೂರಿನ ರಾಮಕೃಷ್ಣ ಮಿಷನ್ ಹಮ್ಮಿಕೊಂಡಿದ್ದ ಸ್ವಚ್ಛತೆಗಾಗಿ ಜಾದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಶಾಲಾ ಮುಖ್ಯಸ್ಥರಾದ ರಮಾ ಎಸ್.ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.
ಕುದ್ರೋಳಿ ಗಣೇಶ್ ಮತ್ತು ಅವರ ತಂಡ ಜಾದುವಿನ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಛ ತೆಯ ಅರಿವನ್ನು ಮೂಡಿಸಿತು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸೋಮಯಾಜಿ ಅವರು ಉಪಸ್ಥಿತರಿದ್ದರು. ಶಿಕ್ಷಕ ರಮೇಶ್ ವಂದಿಸಿದರು.