ಬ್ಯಾನರ್, ಬಂಟಿಂಗ್ ಅಳವಡಿಕೆ, ನೀತಿ ಸಂಹಿತೆ ಉಲ್ಲಂಘನೆ ಕುರಿತು ಚುನಾವಣಾ ಆಯೋಗ ಸೂಚಿಸಿದ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲು ಹಿಂಜರಿಕೆ ಬೇಡ, ಈ ಕುರಿತು ಆಯೋಗ ಸ್ಪಷ್ಟ ನಿರ್ದೇಶನವನ್ನು ನೀಡಿದೆ ಎಂದು ತಹಸಿಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ಭಾನುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ನಡೆದ ಬಂಟ್ವಾಳ ಪುರಸಭಾ ಚುನಾವಣೆ – 2018 ರ ಅಧಿಕಾರಿಗಳ ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬಂಟ್ವಾಳ ಆರಕ್ಷಕ ಠಾಣೆ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ನಗರ ಠಾಣಾಧಿಕಾರಿ ಚಂದ್ರಶೇಖರ್, ಚುನಾವಣಾಧಿಕಾರಿಗಳಾದ ಕೆ. ಮೋಹನ್ ಕುಮಾರ್, ನೋಣಯ್ಯ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಬಂಟ್ವಾಳ ಪುರಸಭೆ ಅಧಿಕಾರಿಗಳಾದ ಮತ್ತಡಿ, ಡೊಮಿನಿಕ್ ಡಿಮೆಲ್ಲೊ, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ ದಿವಾಕರ ಮುಗುಳಿಯ .ನವೀನ್ ಬೆಂಜನ ಪದವು, ಚುನಾವಣೆ ಶಾಖೆಯ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ದ್ವಿತೀಯ ದರ್ಜೆ ಸಹಾಯಕರು ವಿನಯ ನಾಗರಾಜ್, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಎಸ್.ಐ. ಚಂದ್ರಶೇಖರ್, ಏಕಗವಾಕ್ಷಿ ಯೋಜನೆಯಲ್ಲಿ ಇ-ಮೇಲ್ ಮೂಲಕ ಅರ್ಜಿ ಸ್ವೀಕೃತಗೊಂಡರೂ ತಕ್ಷಣ ವಿಲೇವಾರಿ ಮಾಡಲು ಸಹಕರಿಸಬೇಕು, ದಿನದ 24 ಗಂಟೆಗಳೂ ಸಹ ಅಧಿಕಾರಿಗಳು ಲಭ್ಯರಿರಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾದ ಸಂದರ್ಭ ಯಾವುದೇ ಮುಲಾಜಿಲ್ಲದೇ ದೂರು ನೀಡಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿದರು.
ಈ ಸಂದರ್ಭ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಪುರಸಭೆಯ 27 ವಾರ್ಡುಗಳಲ್ಲಿ 18 ಸೂಕ್ಷ್ಮ ಮತ್ತು 14 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಈ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಪುರಸಭೆಯ ವತಿಯಿಂದ ದುರಸ್ತಿ ಕೆಲಸಗಳನ್ನು ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದರು. ಪುರಸಭೆಯಲ್ಲಿ ಏಕಗವಾಕ್ಷಿ ಯೋಜನೆಯನ್ನು ಆರಂಭಿಸಿ, ಅನುಮತಿ ಕೋರಿ ಬಂದ ಎಲ್ಲಾ ಅರ್ಜಿಗಳಿಗೂ ಅಲ್ಲೇ ಅನುಮತಿ ನೀಡುವಂತೆ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಚುನಾವಣಾಧಿಕಾರಿಗಳು ಮತ್ತು ಸೆಕ್ಟರ್ ಅಧಿಕಾರಿಗಳು ಪ್ರತೀ ಮತಗಟ್ಟೆಗೆ ತೆರಳಿ ಮೂಲಭೂತ ಸೌಕರ್ಯದ ಬಗ್ಗೆ ಖಚಿತಪಡಿಸಿಕೊಂಡು ವರದಿ ನೀಡುವಂತೆ ತಹಶೀಲ್ದಾರ್ ಪುರಂದರ ಹೆಗ್ಡೆ ಸೂಚನೆ ನೀಡಿದರು.