ಮಾನವ ಹಕ್ಕುಗಳ ಹೆಸರಲ್ಲಿ ಭಾರತೀಯ ಸೈನಿಕರ ಆತ್ಮಸ್ಥೈರ್ಯ ಉಡುಗಿಸುವ ಕಾರ್ಯ ಬುದ್ಧಿಜೀವಿಗಳು, ಹೋರಾಟಗಾರರ ಹೆಸರಲ್ಲಿ ನಡೆಯುತ್ತಿದೆ ಎಂದು ಚೈತ್ರಾ ಕುಂದಾಪುರ ಹೇಳಿದರು.
ಭಾನುವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರ ಬಳಿ ಹಿಂದು ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಹಿನ್ನೆಲೆಯಲ್ಲಿ ವಾಹನ ಜಾಥಾ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಅಖಂಡ ಭಾರತ ಎಂದರೆ ಕೇವಲ ದೇಶದ ಗಡಿ ವಿಸ್ತರಣೆಯಲ್ಲ, ಭಾರತವನ್ನು ವಿಶ್ವಗುರು ಮಾಡುವುದೂ ಆಗಿದೆ ಎಂದರು.
ಭಾರತ ಏನೆಂಬುದು ಗೊತ್ತಿಲ್ಲದವರಿಂದ ದೇಶ ವಿಭಜನೆ ನಡೆದಿದೆ ಎಂದು ವಿಷಾದಿಸಿದ ಅವರು, ಭಾರತೀಯತೆಯನ್ನು ದಮನಗೊಳಿಸುವ ಹಾಗೂ ಹಿಂದುಗಳ ಆತ್ಮಾಭಿಮಾನವನ್ನು ಕೆಣಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂದು ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಇದೆ ಎಂಬ ಮಾಧ್ಯಮಗಳ ವರದಿಗಳಿವೆ. ಆದರೆ ಇವಕ್ಕೆಲ್ಲ ರಾಜಕಾರಣಿಗಳೇ ಕಾರಣ. ನಕ್ಸಲ್ ವಾದ ಬೆಂಬಲಿಸುವ ಬುದ್ಧಿಜೀವಿಗಳು ತಾವು ಆರಾಮವಾಗಿದ್ದು, ಬಡವರಿಗೆ ಬಂದೂಕು ನೀಡುತ್ತಾರೆ ಎಂದು ಹೇಳಿದರು.
ಆರೆಸ್ಸೆಸ್ ವಿಟ್ಲ ತಾಲೂಕು ಸಂಘಚಾಲಕ ವೆಂಕಟೇಶ ಅಮೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೈನಿಕ ಜನಾರ್ದನ ಮೂಲ್ಯ ಸೈನ್ಯದಲ್ಲಿನ ತಮ್ಮ ಅನುಭವಗಳನ್ನು ವಿವರಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ, ಮಂಗಳೂರು ವಿಭಾಗ ಸಂಚಾಲಕ ರವಿರಾಜ್ ಬಿ.ಸಿ.ರೋಡ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಹಿಂಜಾವೇ ಪ್ರಮುಖರಾದ ರವಿರಾಜ್ ಕಡಬ, ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಪ್ರಮುಖರಾದ ಡಾ.ಕಮಲ ಪ್ರ. ಭಟ್, ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ, ಗಣರಾಜ ಭಟ್ ಕೆದಿಲ, ರಾಜಾರಾಮ ಭಟ್ ಟಿ.ಜಿ., ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ.ರುಕ್ಮಯ ಪೂಜಾರಿ ಉಪಸ್ಥಿತರಿದ್ದರು. ನರಸಿಂಹ ಮಾಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣರಾಜ ಭಟ್ ಬಡೆಕ್ಕಿಲ ವಂದಿಸಿದರು. ಶೃತಿನ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.