www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ರಸ್ತೆ ಹೊಂಡದಿಂದಾಗಿ ವಾಹನಗಳ ಸವಾರರು ಪರಿಪಾಟಲು ಪಡುವುದನ್ನು ಗಮನ ಸೆಳೆಯುವ ಸಲುವಾಗಿ ಮನುಷ್ಯನ ರೀತಿಯ ಗೊಂಬೆಯೊಂದನ್ನು ಸ್ಥಳೀಯರು ಇಟ್ಟ ಪರಿಣಾಮ, ಶನಿವಾರ ಸಂಜೆ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಸುಮಾರು ಅರ್ಧ ತಾಸಿಗೂ ಅಧಿಕ ಹೊತ್ತು ವಾಹನ ದಟ್ಟಣೆಉಂಟಾಯಿತು.
ಬಿ.ಸಿ.ರೋಡಿನಲ್ಲಿ ಹಾದು ಹೋಗುವ ರಾಷ್ಟೀಯ ಹೆದ್ದಾರಿಯಲ್ಲಿ ಪೆಟ್ರೋಲ್ ಬಂಕ್ ನಿಂದ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ವಾಹನಗಳು ಸಾಲುಗಟ್ಟಿದವು. ಸುಮಾರು 5.30 ರಿಂದ 6.15 ರವರೆಗೆ ಲಾರಿ, ಬಸ್, ಕಾರು, ಸ್ಕೂಟರ್, ಬೈಕುಗಳು ಇಲ್ಲಿ ಸಂಚರಿಸಲಾರದೆ ಪರದಾಟ ನಡೆಸಿದವು.
ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಇದ್ದು, ಎಷ್ಟು ಬಾರಿ ತೇಪೆ ಹಾಕಿದರೂ ಫಲಪ್ರದವಾಗದ ಕಾರಣ, ಸ್ಥಳೀಯರು ಮನುಷ್ಯನ ರೀತಿಯ ಗೊಂಬೆಯೊಂದನ್ನು ತಯಾರಿಸಿ ಬಿಳಿ ಪ್ಯಾಂಟ್, ಬಿಳಿ ಕುರ್ತಾ ಹಾಕಿ, ತಲೆಗೆ ಹೆಲ್ಮೆಟ್ ಇಟ್ಟು, ಕೊರಳಿಗೆ ಹಾರ ಹಾಕಲಾಯಿತು.
ಅದಕ್ಕೊಂದು ಸ್ಲೇಟನ್ನು ನೇತು ಹಾಕಿ ಅದರಲ್ಲಿ ಹೀಗೂ ಉಂಟೇ ಎಂದು ಬರೆದ ಗೊಂಬೆ ವಾಹನ ಸವಾರರ ಗಮನವನ್ನೂ ಸೆಳೆಯಿತು. ಇದರಿಂದ ಸಂಚಾರ ದಟ್ಟಣೆ ಉಂಟಾಯಿತು.
ಗೊಂಬೆಯನ್ನು ಕಂಡ ವಾಹನ ಸವಾರರು ನೋಡಲೆಂದು ನಿಂತಾಗ ಉಂಟಾದ ದಟ್ಟಣೆ ಮತ್ತೆ ಉದ್ದಕ್ಕೂ ಬೆಳೆಯಿತು. ಒಂದು ಹಂತದಲ್ಲಿ ಫ್ಲೈಓವರ್ ಮೇಲಿಂದ ವಾಹನಗಳು ಸಾಗಲು ಆರಂಭಗೊಂಡವು. ಬಳಿಕ ಬಂಟ್ವಾಳದ ಹೋಂಗಾರ್ಡ್ ಸಿಬ್ಬಂದಿ ಸಂಚಾರ ನಿಯಂತ್ರಿಸಲು ಸಫಲರಾದರು.
ಗೊಂಬೆಯನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆಅನುವು ಮಾಡಿಕೊಡಲಾಯಿತು. ಬಿ.ಸಿ.ರೋಡ್ ಹೆದ್ದಾರಿಯಲ್ಲಿ ಹೊಂಡಗಳಿಂದಾಗಿಯೇ ಕಳೆದ ಕೆಲ ತಿಂಗಳಿಂದ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದು, ದೂರದೂರಿಗೆ ಹೋಗುವ ಪ್ರಯಾಣಿಕರು ತೊಂದರೆಗೊಳಗಾಗುತ್ತಿದ್ದಾರೆ. ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಹೆದ್ದಾರಿ ಅಧಿಕಾರಿಗಳನ್ನು ಎಚ್ಚರಿಸಿದ್ದರು.