ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಸಂಜೆ ಕೈಕಂಬದಿಂದ-ಪಾಣೆಮಂಗಳೂರುವರೆಗೆ “ಆಝಾದಿ ರ‍್ಯಾಲಿ” ನಡೆಯಿತು.
ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಅವರಿಂದ ಉದ್ಘಾಟನೆಗೊಂಡ ರ‍್ಯಾಲಿಯು ಕೈಕಂಬದಿಂದ ಬಿ.ಸಿ.ರೋಡ್ ಮಾರ್ಗವಾಗಿ ಸಾಗಿ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ಸಮಾಪ್ತಿಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ನಾಯಕ ಶಾಫಿ ಸಅದಿ ಅವರು ಮುಖ್ಯ ಅತಿಥಿಗಳಾಗಿ ಭಾಗಹಿಸಿ, ದೇಶದಲ್ಲಿ ಸೌಹಾರ್ದತೆ, ಧರ್ಮಸಹಿಷ್ಣುತೆ, ಪರಸ್ಪರ ಪ್ರೀತಿ ಹಾಗೂ ಸಾಮರಸ್ಯ ಬೆಳೆಯಬೇಕೆಂಬ ಉದ್ದೇಶದಿಂದ ಈ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂದೇಶ ಭಾಷಣ ಮಾಡಿದರು.
ಜಿಲ್ಲೆಯ 10 ಡಿವಿಷನ್ ಕೇಂದ್ರವಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ೫೦೦ ಘಟಕಗಳ ಕಾರ್ಯಕರ್ತರು ಈ ರ‍್ಯಾಲಿಯಲ್ಲಿ ಭಾಗವಹಿದ್ದರು. ಸಂಘಟನೆಯ ವಿಶೇಷ ತಂಡವಾದ ರೈಟ್ ಟೀಮ್ ಹಾಗೂ ಸಮವಸ್ತ್ರದಾರಿಗಳಾದ ಕಾರ್ಯಕರ್ತರ ರ‍್ಯಾಲಿಯು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಶುಕ್ರವಾರ ಬೆಳಿಗ್ಗಿನಿಂದಲೂ ಸುರಿಯುತ್ತಿದ್ದರೂ ಮಳೆಗೆ ಕ್ಯಾರೇ ಎನ್ನದೆ ಕಾರ್ಯಕರ್ತರು ಹೆಜ್ಜೆಹಾಕಿದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಮುಖಂಡರಾದ ಯಾಕೂಬ್ ಸಅದಿ, ಅಬ್ದುರ್ರಹೀಂ ಸಅದಿ, ಅಶ್ರಫ್ ರಝಾ, ಅಬ್ದುರ್ರಶೀದ್ ಹಾಜಿ ವಗ್ಗ, ಅಬ್ದರ್ರಹ್ಮಾನ್ ಹಾಜಿ ಕೃಷ್ಣಾಪುರ, ಅಬ್ದರ್ರಝಾಕ್ ಸಖಾಫಿ ಮಡಂತ್ಯಾರು, ಇಬ್ರಾಹಿಂ ಸೆರ್ಕಳ, ಶರೀಫ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಜಿಲ್ಲಾ ಪ್ರ.ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಅಲಿ ವಂದಿಸಿದರು.