ಮೋದಿ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣ ವಿಫಲಗೊಂಡಿದೆ ಈ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರವನ್ನು ಮರು ಅಧಿಕಾರಕ್ಕೆ ಬಾರದಂತೆ ತಡೆಯಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಅಭಿಪ್ರಾಯಪಟ್ಟರು.
ಬಿಸಿರೋಡು ಲಯನ್ಸ್ ಸೇವಾ ಮಂದಿರದಲ್ಲಿ ಪಕ್ಷದ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ಜರುಗಿದ ಪ್ರತಿಭಟನಾ ಆಂದೋಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತಿದ್ದರು.
ಚುನಾವಣಾ ಸಂದರ್ಭ ದೇಶದ ಮತದಾರರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾಗಿ ಬೆಲೆ ಏರಿಕೆ ತಡೆಗಟ್ಟುವ ಮಾತನ್ನು ಈಡೇರಿಸುವ ಬದಲಾಗಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡೀಸೆಲ್ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ. ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ತಡೆಯಲು ಕ್ರಮ ವಹಿಸುವ ಭರವಸೆ ನೀಡಿದ್ದ ಮೋದಿ ಸರಕಾರ ಇದುವರೆಗೂ ಲೋಕಪಾಲರನ್ನು ನೇಮಿಸಿಲ್ಲ. ಸರಕಾರ ಸಂಘಸಂಸ್ಥೆಗಳ ಅವ್ಯವಹಾರ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಪ್ರಮುಖ ಅಸ್ತ್ರವಾಗಿದ್ದ ಮಾಹಿತಿ ಹಕ್ಕು ಕಾನೂನಿಗೆ ತಿದ್ದುಪಡಿ ತಂದು ಅದನ್ನು ಹಲ್ಲಿಲ್ಲದ ಹಾವಿನಂತೆ ಮಾಡಲು ಮೋದಿ ಸರಕಾರ ಮುಂದಾಗಿದೆ. ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಈ ಸರಕಾರ ಮರು ಅಧಿಕಾರಕ್ಕೆ ಬಂದರೆ ದೇಶದ ಜನಸಾಮಾನ್ಯರ, ರೈತ ಕಾರ್ಮಿಕರ ಬದುಕು ಅಧೋಗತಿಗೆ ಇಳಿಯಬಹುದು. ಅದನ್ನು ಮನದಲ್ಲಿ ಇಟ್ಟುಕೊಂಡು ಸಿಪಿಐನ ರಾಷ್ಟ್ರೀಯ ಮಂಡಳಿ ಆಗಸ್ಟ್.1ರಿಂದ 14ರ ವರೆಗೆ ಜನಾಂದೋಲನದ ಮುಖೇನ ಜನಜಾಗೃತಿ ಮೂಡಿಸುವ ಚಳುವಳಿ ಹಮ್ಮಿಕೊಂಡಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಐವೈಎಫ್ ನ ರಾಜ್ಯ ಸಂಚಾಲಕರಾದ ಎಚ್. ಎಂ. ಸಂತೋಷ್ ಮಾತನಾಡಿ ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗದ ಮಾತು ಉಳಿಸಿಕೊಳ್ಳುವ ಬದಲು ಇದ್ದ ಉದ್ಯೋಗಗಳನ್ನು ಕಸಿದುಕೊಳ್ಳುವ ನೀತಿ ಅನುಸರಿಸಿ ನಿರುದ್ಯೋಗ ಹೆಚ್ಚಿಸಿದೆ. ಕಾರ್ಪೊರೇಟ್ ಕಂಪೆನಿಗಳ ಪರವಾದ ಆಡಳಿತ ಕ್ರಮಗಳನ್ನು ಜಾರಿಗೊಳಿಸಿ ಕಾರ್ಮಿಕರ ಹಿತರಕ್ಷಣೆ ಮಾಡುವ ಹಲವಾರು ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇದೊಂದು ಯುವಜನ ವಿರೋಧಿ, ಕಾರ್ಮಿಕ ವಿರೋಧಿ ಸರ್ಕಾರವಾಗಿದ್ದು ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬಾರದಂತೆ ತಡೆಯಬೇಕಾಗಿದೆ ಎಂದರು.
ಎಐಟಿಯುಸಿ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಎಚ್ ವಿ ರಾವ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಬಿ.ಶೇಖರ್, ಮಾಜೀ ಪುರಸಭಾ ಉಪಾಧ್ಯಕ್ಷ ಪಿ.ವಿಠಲ ಬಂಗೇರ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿಸಿದರು. ಪ್ರತಿಭಟನಾ ಆಂದೋಲನದ ನೇತೃತ್ವವನ್ನು ಪಕ್ಷದ ಜಿಲ್ಲಾ ಮಂಡಳಿ ಸದಸ್ಯ ಕೆ.ಈಶ್ವರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಸರಸ್ವತಿ ಕೆ. ಜಿಲ್ಲಾ ಮಂಡಳಿ ಸದಸ್ಯೆ ಭಾರತಿ ಪ್ರಶಾಂತ್, ತಾಲೂಕು ಸಮಿತಿ ಸದಸ್ಯರುಗಳಾದ ಬಾಬು ಭಂಡಾರಿ, ಬೇಬಿ ಪಿ ಸಂಜೀವ, ಎನ್ ಎ ಹಮೀದ್, ಬಿ ಎಂ ಹಸೈನಾರ್, ಓ ಕೃಷ್ಣ, ದೇರಣ್ಣ ಪೂಜಾರಿ ವಹಿಸಿದ್ದರು. ತಾಲೂಕು ಸಹ ಕಾರ್ಯದರ್ಶಿ ಪ್ರೇಮನಾಥ್ ಕೆ ವಂದಿಸಿದರು.