www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಉರಿಬಿಸಿಲಿದ್ದ ಸಂದರ್ಭ ಬಂಟ್ವಾಳ, ಪಾಣೆಮಂಗಳೂರು ಪರಿಸರದಲ್ಲಿ ಕಾಣಿಸಿದ್ದ ನೆರೆ ನೀರು ಇಳಿಮುಖವಾಗಿದೆ. ಆದರೆ ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಚಳಿಯ ವಾತಾವರಣ ಕಂಡುಬಂತು.
ಗುರುವಾರ ಮಧ್ಯಾಹ್ನದ ವೇಳೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಇದ್ದು ಅಪಾಯದ ಮಟ್ಟ ತಲುಪಿತ್ತು. ಆದರೆ ರಾತ್ರಿಯಾಗುತ್ತಿದ್ದಂತೆ ನೀರಿನ ಮಟ್ಟ ಇಳಿಮುಖವಾಗತೊಡಗಿತು. ಶುಕ್ರವಾರ ಬೆಳಗ್ಗೆ 6.4 ಮೀಟರ್ ಎತ್ತರದಲ್ಲಿ ನದಿ ತುಂಬಿ ಹರಿಯುತ್ತಿದ್ದರೆ, ಸಂಜೆಯ ವೇಳೆ ನೀರಿನ ಮಟ್ಟ 6.2 ಮೀಟರ್ ಇತ್ತು. ಅಂದರೆ ಒಂದೇ ದಿನದಲ್ಲಿ 2.5 ಮೀಟರ್ ವ್ಯತ್ಯಾಸ ಕಂಡುಬಂದಿದ್ದು, ತೀರ ಪ್ರದೇಶದ ಜನರು ಸಮಾಧಾನಪಟ್ಟುಕೊಂಡರು.
ಗುರುವಾರ ತಾಲೂಕಿನಲ್ಲಿ ಮಳೆಯಾಗದಿದ್ದರೂ ನೇತ್ರಾವತಿ ನದಿಯಲ್ಲಿ ನೀರು ಏರಿಕೆಯಾಗಿರುವುದು ಹಾಗೂ ಎಎಂಆರ್, ಸರಪಾಡಿ ಅಣೆಕಟ್ಟಿನಿಂದ ನೀರು ಹೊರಬಿಟ್ಟ ಕಾರಣ ಬಂಟ್ವಾಳ ಪ್ರದೇಶದ ನದಿ ತೀರದ ಜಾಗಗಳಾದ ಜಕ್ರಿಬೆಟ್ಟು, ಬಡ್ಡಕಟ್ಟೆ, ಆಲಡ್ಕ, ಕಂಚಿಕಾರಪೇಟೆಗಳಲ್ಲಿ ನದಿಯಿಂದ ನೀರು ಹೊರಬಂದಿತ್ತು. ಅಪಾಯದ ಮಟ್ಟದಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿರುವುದು ಕಂಡುಬಂದಿತ್ತು. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಸಹಿತ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮುನ್ನೆಚ್ಚರಿಕೆಯ ಕ್ರಮವಾಗಿ ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದರು. ಆದರೆ ಇಷ್ಟೆಲ್ಲ ನದಿ ನೀರು ರಸ್ತೆಗೆ ಬರುತ್ತಿರುವಾಗಲೂ ಸೂರ್ಯನ ಪ್ರಖರ ಬಿಸಿಲಿತ್ತು.
ಶುಕ್ರವಾರ ಬಂಟ್ವಾಳದ ಚಿತ್ರಣವೇ ಬದಲಾಯಿತು. ಏರಿದ್ದ ನದಿ ನೀರು ತಗ್ಗಿತು. ನೆರೆ ಕಡಿಮೆಯಾಯಿತು. ಆದರೆ ಮಳೆ ಬೆಳಗ್ಗಿನಿಂದಲೇ ಧಾರಾಕಾರವಾಗಿ ಸುರಿಯಿತು. ಈ ಸಂದರ್ಭ ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳುವವರು ತೊಂದರೆಗೆ ಒಳಗಾದರು. ಮಧ್ಯಾಹ್ನದ ವೇಳೆ ನದಿಯ ನೀರಿನ ರಭಸವೂ ಇಳಿಮುಖವಾಯಿತು. ಆದರೆ ಸಂಜೆಯವರೆಗೆ ಬಂಟ್ವಾಳ ತಾಲೂಕಿನ ಪರಿಸರದಲ್ಲಿ ಮಳೆ ನಿಲ್ಲಲಿಲ್ಲ.