ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದ ಶಿರಾಡಿ, ಉದನೆ, ನೇಲಡ್ಕ, ಶಿಶಿಲ ಪ್ರದೆಶದಲ್ಲಿ ರಸ್ತೆ, ಮನೆಗಳು ಜಲಾವೃವಾಗಿದ್ದು, ಮಂಗಳೂರು- ಬೆಂಗಳೂರು ರಾಷ್ತ್ರೀಯ ಹೆದ್ದಾರಿ ಸಂಚಾರ ಅಸ್ತವ್ಯವಸ್ತಗೊಂಡಿದೆ. ಇದರಿಂದಾಗಿ ಶಿರಾಡಿ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಯಿತು.
ಗುಂಡ್ಯ ಹೊಳೆಯ ಪ್ರವಾಹದಿಂದಾಗಿ ಶಿರಾಡಿ, ಉದನೆ, ನೇಲಡ್ಕ ಪ್ರದೇಶದಲ್ಲಿ ರಾಷ್ತ್ರೀಯ ಹೆದ್ದಾರಿ ಜಲವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಯಿತು. ನೆರಿಯ – ಕಿಕ್ಕಿಂಜೆ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಕಳೆದ ನಾಲ್ಕೈದು ವರ್ಷಗಳ ಹಿಂದೆ ಇದೇ ರೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿತ್ತು. ಮುಳುಗುವ ಹಂತದಲ್ಲಿರುವ ಮನೆಗಳ ಪಕ್ಕದಿಂದ ಜನರನ್ನು ಸ್ಥಳಾಂತರಗೊಳಿಸಲಾಗುತ್ತಿದ್ದು, ಅಡ್ಡಹೊಳೆ,ಉದನೆ,ಶಿರಾಡಿ,ಎಂಜಿರ ಕಡೆಗಳಲ್ಲಿ ರಸ್ತೆಗೆ ನೀರು ನುಗ್ಗಿದೆ. ಉಪ್ಪಿನಂಗಡಿಯಿಂದ ಗುಂಡ್ಯದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಮಣ್ಣಿನ ರಾಶಿ ಪೇರಿಸಿಡಲಾಗಿದೆ. ಮಳೆ, ನೆರೆಯ ಜೊತೆಗೆ ಕಾಮಗಾರಿಯೂ ಸೇರಿಕೊಂಡು, ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.