ಮಳೆ ಧಾರಾಕಾರ ಸುರಿಯದಿದ್ದರೂ ನೇತ್ರಾವತಿ ನದಿಯಲ್ಲಿ ನೀರು ಏರಿಕೆ ಕಂಡುಬಂದಿದೆ. ಧರ್ಮಸ್ಥಳ, ಉಪ್ಪಿನಂಗಡಿ, ಬಂಟ್ವಾಳ ಪ್ರದೇಶಗಳಲ್ಲಿ ಜೀವನದಿ ನೇತ್ರಾವತಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಧರ್ಮಸ್ಥಳದಲ್ಲಿ ಈಗಾಗಲೇ ಸ್ನಾನಘಟ್ಟದಲ್ಲಿ ಎಚ್ಚರಿಕೆಯ ಸೂಚನೆ ಹಾಕಲಾಗಿದೆ. ಉಪ್ಪಿನಂಗಡಿಯಲ್ಲೂ ಸಂಗಮವಾಗಲು ಕಾಲ ಸನ್ನಿಹಿತವಾಗಿದೆ. 8.7 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಬಂಟ್ವಾಳ ಪೇಟೆಯಲ್ಲಿ ನದಿ ಉಕ್ಕಿ ಸಮೀಪದ ರಸ್ತೆಗಳಿಗೆ ನುಗ್ಗಿದೆ.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಾಕೃತಿಕ ವಿಕೋಪ ಅಧಿಕಾರಿ ವಿಷುಕುಮಾರ್, ಗ್ರಾಮಲೆಕ್ಕಾಧಿಕಾರಿ ಶಿವಾನಂದ ನಾಟೆಕಾರ್, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಸುಂದರ, ಶೀತಲ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೇತ್ರಾವತಿ ನದಿ ನೀರಿನ ಮಟ್ಟ ಮಧ್ಯಾಹ್ನದ ವೇಳೆ 8.7 ಮೀಟರ್ ಆಗಿದೆ.
ಉಪ್ಪಿನಂಗಡಿಯಲ್ಲೂ ನೇತ್ರಾವತಿ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿದ್ದು, ಉಭಯ ನದಿಗಳು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣ ಪ್ರವೇಶಿಸಿ ಸಂಗಮವಾಗಲು ಎರಡು ಮೆಟ್ಟಿಲಷ್ಟೇ ಬಾಕಿದೆ.
ನಿನ್ನೆ ರಾತ್ರಿ ಇಳಿಕೆಗೊಂಡಿದ್ದ ನದಿ ನೀರು ಮುಂಜಾನೆಯಾಗುತ್ತಲೇ ಏರಿಕೆಯಾಗತೊಡಗಿದವು. ಸುಮಾರು ಬೆಳಗಿನ 10 ಗಂಟೆಯ ಸುಮಾರಿಗೆ ದೇವಸ್ಥಾನಕ್ಕೆ ನೀರು ಪ್ರವೇಶಿಸಲು ಎರಡು ಮೆಟ್ಟಿಲಷ್ಟು ಬಾಕಿ ಇದೆ. ಸ್ಥಳಕ್ಕೆ ಪುತ್ತೂರು ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದು, ಕಂದಾಯ ಇಲಾಖಾಧಿಕಾರಿಗಳು, ಗೃಹರಕ್ಷಕ ವಿಪತ್ತು ನಿರ್ವಹಣಾ ತಂಡದವರು ಹಾಗೂ ಪೊಲೀಸರು ಈಜು ತಜ್ಞರು ಸ್ಥಳದಲ್ಲಿದ್ದಾರೆ.