ಸ್ಥಳೀಯ ಸಂಸ್ಥೆಗಳ ಚುನಾವಣೆಯು ಘೊಷಣೆಯಾದ ಹಿನ್ನಲೆಯಲ್ಲಿ ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರಕ್ಕೂಳಪಟ್ಟ ಮುಖಂಡರ ಸಭೆಯು ಪಾಣೆಮಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕರವರ ನೇತೃತ್ವದಲ್ಲಿ ನಡೆಯಿತು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ಮಾತನಾಡಿ, ರಾಜ್ಯದಲ್ಲಿ ಬಂಟ್ವಾಳ ಪುರಸಭೆ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಕಳೆದ ಬಾರಿ ಮೂರು ಸ್ಥಾನಗಳನ್ನು ಗೆದ್ದು ಪಕ್ಷದ ಕೀರ್ತಿಯನ್ನು ಹೆಚ್ಚಿಸಿತ್ತು. ಈ ಬಾರಿಯೂ ಪಕ್ಷ ಅತೀ ಹೆಚ್ಚು ಸ್ಥಾನ ಪಡೆದು ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದರು.
ರಾಜ್ಯದಿಂದ ಬಂಟ್ವಾಳ ಚುನಾವಣಾ ವೀಕ್ಷಕರಾಗಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಪುತ್ತೂರು ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು. ಚುನಾವಣಾ ವೀಕ್ಷಕ ಅಬ್ದುಲ್ ಲತೀಫ್ ಮಾತನಾಡಿ, ಪುರಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಕಾರ್ಯಕರ್ತರು, ನಾಯಕರು ಇಂದಿನಿಂದಲೇ ಪರಿಶ್ರಮವಹಿಸಿ, ಪಕ್ಷಕ್ಕೆ ಅಭೂತಪೂರ್ವ ವಿಜಯವನ್ನು ಗಳಿಸಿಕೊಡುವಲ್ಲಿ ಪ್ರಯತ್ನ ಮಾಡಬೇಕು ಎಂದರು.
ಈಗಾಗಲೆ ಬಹುತೇಕ ವಾರ್ಡ್‌ಗಳಿಗೆ ಬ್ರಾಂಚ್ ಮಟ್ಟದಿಂದ ಅಭ್ಯರ್ಥಿಗಳ ಹೆಸರು ಬಂದಿದ್ದು, ರಾಜ್ಯ ಸಮಿತಿಯೂಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ವಾರದೊಳಗೆ ಅಂತಿಮ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬಂಟ್ವಾಳ ಪುರಸಭೆಯ ಚುನಾವಣೆಯಲ್ಲಿ ಈ ಬಾರಿ ಪಕ್ಷದ ಸ್ಪರ್ಧೆಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿದರು.
ಸಂಧರ್ಭದಲ್ಲಿ ಚುನಾವಣಾ ಸಹ ವೀಕ್ಷಕ ಇಜಾಝ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಉಪಾಧ್ಯಕ್ಷ ಇಕ್ಬಾಲ್, ಕ್ಷೇತ್ರ ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಮುಖಂಡರಾದ ಅಬ್ದುಲ್‌ಖಾದರ್, ಝಕರಿಯಾ ಕಲ್ಲಡ್ಕ, ಸಲೀಂ ಕುಂಪನಮಜಲು, ಪುರಸಭಾ ಸಮಿತಿ ಅಧ್ಯಕ್ಷ ಮುನೀಶ್ ಅಲಿ, ಕಾರ್ಯದರ್ಶಿ ಸಿದ್ದೀಕ್ ನಂದರಬೆಟ್ಟು ಉಪಸ್ಥಿತರಿದ್ದರು.