ಸಂಪೂರ್ಣ ಹದಗೆಟ್ಟಿರುವ ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಕೇಂದ್ರಭಾಗದಲ್ಲಿ ಕಾಂಕ್ರೀಟ್ ಹಾಕಿ ರಸ್ತೆಯ ರಿಪೇರಿ ಕಾರ್ಯ ಗುರುವಾರ ಸಂಜೆ ಆರಂಭಗೊಂಡಿದೆ.
ಮುಖ್ಯ ಹೆದ್ದಾರಿ ರಸ್ತೆಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಕಡೆಗೆ ಫ್ಲೈ ಓವರ್ ಅಡಿಯಿಂದ ತಿರುಗುವ ಸಂದರ್ಭ ಸರ್ವೀಸ್ ರಸ್ತೆಯ ಭಾಗ ಎತ್ತರದ ದಿಬ್ಬದಂತಿದೆ. ಈ ಸಂದರ್ಭ ರಸ್ತೆಯನ್ನು ಹತ್ತಿ ಇಳಿಯಬೇಕಾಗುತ್ತದೆ. ಎರಡೂ ಪಾರ್ಶ್ವಗಳಲ್ಲಿ ಸಿಮೆಂಟ್ ಎದ್ದು ಹೋಗಿದ್ದು, ವಾಹನಗಳನ್ನು ರಸ್ತೆಗಿಳಿಸುವ ಸಂದರ್ಭ ಸಮಸ್ಯೆ ಉಂಟಾಗುತ್ತಿತ್ತು. ಭಾರಿ ಮಳೆ ಸುರಿದ ವೇಳೆ ನೀರು ನಿಂತು ಹೊಳೆಯಂತಾಗುತ್ತಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳನ್ನು ಈ ಕುರಿತು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಾರಣ ಇನ್ನೂ ವಿಳಂಬಗತಿಯಲ್ಲಿ ರಿಪೇರಿಯೂ ಆಗದ ಬಗ್ಗೆ ಕಾಂಗ್ರೆಸ್ ಸಂಸದರನ್ನು ಟೀಕಿಸಲು ಸರ್ವೀಸ್ ರಸ್ತೆಯನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಮೂರು ದಿನಗಳ ಹಿಂದೆ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ನಗರ ಪೊಲೀಸರಿಗೆ ದೂರು ನೀಡಿ ರಸ್ತೆ ಅವ್ಯವಸ್ಥೆಗೆ ಎನ್.ಎಚ್.ಎ.ಐ. ಹೊಣೆಗಾರರು ಎಂದು ತಿಳಿಸಿದ್ದರು.