ಬಂಟ್ವಾಳ ಸೇರಿದಂತೆ ರಾಜ್ಯದ 105 ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಆಗಸ್ಟ್ 29ಕ್ಕೆ ಮತದಾನ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಆಗಸ್ಟ್ 10ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.
29 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಆಗಸ್ಟ್ 17 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆಗಸ್ಟ್ 29ಕ್ಕೆ ಮತದಾನ ನಡೆಯಲಿದ್ದು, ಸೆಪ್ಟೆಂಬರ್ 1 ಕ್ಕೆ ಮತ ಎಣಿಕೆ ನಡೆಯಲಿದೆ. ಮೊದಲ ಬಾರಿಗೆ ಇವಿಎಂ ಬಳಕೆ ಮಾಡಲಾಗುತ್ತಿದ್ದು, ನೋಟಾ ಅಳವಡಿಸಲಾಗುತ್ತದೆ ಎಂದು ಆಯುಕ್ತರು ಹೇಳಿದ್ದಾರೆ.
ಪುರಸಭೆ ಮೀಸಲಾತಿ:
ಬಂಟ್ವಾಳ ಪುರಸಭೆಗೆ ಚುನಾವಣೆ ದಿನಾಂಕ ನಿಗದಿಯಾದಂತೆಯೇ ಮೀಸಲಾತಿ ಪಟ್ಟಿಯೂ ಪ್ರಕಟಗೊಂಡಿದೆ. ಬಂಟ್ವಾಳ ಪುರಸಭೆಗೆ ಈ ಹಿಂದೆ 23 ವಾರ್ಡುಗಳಿದ್ದವು. ಈ ಬಾರಿ ಜನಸಂಖ್ಯೆಗೆ ಅನುಗುಣವಾಗಿ ನಾಲ್ಕು ವಾರ್ಡುಗಳು ಜಾಸ್ತಿಯಾಗಿದ್ದು, 27 ವಾರ್ಡುಗಳಿಗೆ ಸಂಬಂಧಿಸಿ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್.ಬಾಗಲವಾಡೆ ಪ್ರಕಟಿಸಿ ಆದೇಶಿಸಿದ್ದಾರೆ.
ವಾರ್ಡ್‌ವಾರು ಮೀಸಲಾತಿ:
ಬಂಟ್ವಾಳ ಕಸ್ಬಾ:
ವಾರ್ಡ್ 1-ಹಿಂದುಳಿದ ವರ್ಗ(ಎ), ವಾರ್ಡ್ 2-ಸಾಮಾನ್ಯ, ವಾರ್ಡ್ 3- ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ 4-ಸಾಮಾನ್ಯ ಮಹಿಳೆ, ವಾರ್ಡ್ 5-ಪರಿಶಿಷ್ಟ ಜಾತಿ, ವಾರ್ಡ್ 6-ಸಾಮಾನ್ಯ ಮಹಿಳೆ, ವಾರ್ಡ್ 7-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 8- ಹಿಂದುಳಿದ ವರ್ಗ(ಎ).
ಬಂಟ್ವಾಳ ಬಿಮೂಡ:
ವಾರ್ಡ್ 9-ಹಿಂದುಳಿದ ವರ್ಗ (ಎ), ವಾರ್ಡ್ 10 -ಸಾಮಾನ್ಯ ಮಹಿಳೆ, ವಾರ್ಡ್ 11-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 12-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 13-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 14-ಸಾಮಾನ್ಯ ಮಹಿಳೆ, ವಾರ್ಡ್ 15-ಸಾಮಾನ್ಯ, ವಾರ್ಡ್ 16-ಹಿಂದುಳಿದ ವರ್ಗ(ಎ), ವಾರ್ಡ್ 17-ಸಾಮಾನ್ಯ, ವಾರ್ಡ್ 18-ಸಾಮಾನ್ಯ, ವಾರ್ಡ್ 19-ಹಿಂದುಳಿದ ವರ್ಗ(ಎ), ವಾರ್ಡ್ 20-ಸಾಮಾನ್ಯ, ವಾರ್ಡ್ 21-ಹಿಂದುಳಿದ ವರ್ಗ(ಬಿ), ವಾರ್ಡ್ 22-ಸಾಮಾನ್ಯ ಮಹಿಳೆ.
ಪಾಣೆಮಂಗಳೂರು:
ವಾರ್ಡ್ 23-ಸಾಮಾನ್ಯ, ವಾರ್ಡ್ 24-ಸಾಮಾನ್ಯ, ವಾರ್ಡ್ 25-ಸಾಮಾನ್ಯ ಮಹಿಳೆ, ವಾರ್ಡ್ 26-ಸಾಮಾನ್ಯ ಮಹಿಳೆ, ವಾರ್ಡ್ 27-ಪರಿಶಿಷ್ಟ ಪಂಗಡ.
೨೭ ವಾರ್ಡ್‌ಗಳಲ್ಲಿ 13 ವಾರ್ಡ್‌ಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ.
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಸಭೆಗಳನ್ನು ಮಾಡಿವೆ. ಎಸ್.ಡಿ.ಪಿ.ಐ. ಕೂಡ ಹೊಸ ಹುರುಪಿನಿಂದಿಗೆ ಸ್ಪರ್ಧೆಗೆ ಇಳಿಯುವ ಹುಮ್ಮಸ್ಸಿನಲ್ಲಿದೆ. ನಿರ್ಗಮನ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ಹಿಂದಿನ ಅವಧಿಯಲ್ಲಿ ಪುರಸಭೆ ಬಿಜೆಪಿ ಆಡಳಿತದಲ್ಲಿತ್ತು.