ನಿಮಗೆ ಈ ಬಾರಿ ಸ್ಪರ್ಧೆಗೆ ಅವಕಾಶ ಉಂಟಾ?
ನಮ್ಮಲ್ಲಿ ಮೀಸಲಾತಿ ಚೇಂಜ್ ಆಗಿದೆ. ನಿಮ್ಮದು ಹೇಗುಂಟು ಎಂಬ ಮಾತುಕತೆಗಳು ಸದಸ್ಯರ ಮಧ್ಯೆ ನಡೆಯುತ್ತಿರುವ ಹೊತ್ತಲ್ಲೇ ಹೊರಗೆ ಬೆಂಗಳೂರಿನಲ್ಲಿ ಪುರಸಭೆ ಚುನಾವಣೆ ಘೋಷಣೆ. ಮಧ್ಯಾಹ್ನ ತಮ್ಮ ಅವಧಿಯ ಕೊನೇ ಮೀಟಿಂಗ್ ಮುಗಿಸಿ ಹೊರಟ ಕೆಲ ಸದಸ್ಯರು ಚುನಾವಣಾ ತಯಾರಿಯ ಬ್ಯುಸಿಯಲ್ಲಿದ್ದರು. ವಾಗ್ಯುದ್ಧ, ಆರೋಪ, ಪ್ರತ್ಯಾರೋಪಗಳೊಂದಿಗೆ ಮೀಟಿಂಗ್ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆದು ಪರಿಸಮಾಪ್ತಿಯಾಯಿತು!.
ಟ್ರಾಫಿಕ್, ತ್ಯಾಜ್ಯ ವಿಲೇವಾರಿ, ಪಾರ್ಕ್ ನಿರ್ವಹಣೆ, ಲೆಕ್ಕಪತ್ರಗಳ ಗೊಂದಲ, ಪಾರ್ಕಿಂಗ್ ಅವ್ಯವಸ್ಥೆಗಳ ಸಮಸ್ಯೆ ಸೆಪ್ಟೆಂಬರ್ ತಿಂಗಳಲ್ಲಿ ಅಧಿಕಾರಕ್ಕೆ ಬರುವ ಹೊಸ ಸದಸ್ಯರ ಹೆಗಲಿಗೆ ವರ್ಗಾವಣೆಯಾಗುವುದಂತೂ ನಿಶ್ಚಿತ.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಟ್ರಾಫಿಕ್ ಎಸ್.ಐ. ಯಲ್ಲಪ್ಪ ಅವರೆದುರು ಪಾರ್ಕಿಂಗ್ ಸಮಸ್ಯೆಯ ಕುರಿತು ಸದಸ್ಯರು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭ ಎಸ್.ಐ. ಮಾತನಾಡಿ, ಪುರಸಭೆ ವತಿಯಿಂದ ನೋ ಪಾರ್ಕಿಂಗ್ ಅನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕಾದ ಕುರಿತು ವಿವರಿಸಿದರು. ಟೋಲ್ ಗೇಟ್ ಸರ್ವೀಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಲು ಪೊಲೀಸ್ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತದೆ ಎಂದು ಹೇಳಿದ ಸದಸ್ಯ ದೇವದಾಸ ಶೆಟ್ಟಿ, ಬಿ.ಸಿ.ರೋಡಿನ ರಸ್ತೆ ಸಮಸ್ಯೆ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಗಮನ ಸೆಳೆದರು. ಸದಸ್ಯರಾದ ಬಿ.ಪ್ರವೀಣ್, ಜಗದೀಶ ಕುಂದರ್, ಸದಾಶಿವ ಬಂಗೇರ, ಮಹಮ್ಮದ್ ಶರೀಫ್ ಮೊದಲಾದವರು ಟ್ರಾಫಿಕ್ ಸಮಸ್ಯೆಗಳ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬಿ.ಸಿ.ರೋಡ್ ನಲ್ಲಿ ಎಲ್ಲಿ ಪಾರ್ಕಿಂಗ್ ಮಾಡಬಹುದು ಎಂಬ ಸರ್ವೆಯನ್ನು ನಡೆಸಲಾಗುವುದು ಎಂದರು.
ಶುದ್ಧ ಕುಡಿಯುವ ನೀರನ್ನು ದಿನದ ಇಪ್ಪತ್ತನಾಲ್ಕು ತಾಸು ಒದಗಿಸುವ ಯೋಜನೆ ವಿಫಲಗೊಂಡಿದೆ ಎಂದು ಆರೋಪಿಸಿದ ಸದಸ್ಯ ಗೋವಿಂದ ಪ್ರಭು, ನದಿಯ ನೀರು ಮಾರ್ಗಕ್ಕಾ, ಜನರಿಗಾ ಎಂಬಂತಾಗಿದೆ. ಪೈಪುಗಳು ಲೀಕೇಜ್ ಆಗುತ್ತಿದ್ದು, ಸರಬರಾಜು ವ್ಯವಸ್ಥೆ ಸರಿ ಇಲ್ಲ ಎಂದು ಗಮನ ಸೆಳೆದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪುರಸಭೆಯ 56 ಲಕ್ಷ ರೂ ಎಲ್ಲಿಗೆ ಹೋಯಿತು ಎಂಬ ಉತ್ತರ ಇಲ್ಲ ಎಂದು ಬಿಜೆಪಿ ಸದಸ್ಯರಾದ ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಲೆಕ್ಕಪತ್ರದ ಗೊಂದಲಗಳ ಕುರಿತು ಪ್ರಸ್ತಾಪ ಮಾಡಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಹೇಳಿದರೆ, ಯಾರ ಹಸ್ತಕ್ಷೇಪ ಲೆಕ್ಕಪತ್ರ ವಿಚಾರದಲ್ಲಿ ಆಗಿದೆ ಉತ್ತರ ಕೊಡಿ ಎಂದು ಗೋವಿಂದಪ್ರಭು ಪಟ್ಟುಹಿಡಿದರು.
ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿದ್ದ ಕೆಎಸ್ಸಾರ್ಟಿಸಿ ಟಿಕೆಟ್ ಕೌಂಟರ್ ಕೊಠಡಿಯನ್ನು ರಾತ್ರೋರಾತ್ರಿ ಸಾರ್ವಜನಿಕರು ಸೇರಿ ಭಾಗಶಃ ಕೆಡವಿದ್ದಾರೆ. ಉಳಿದಂತೆ ಸಂಪೂರ್ಣ ತೆರವಿಗೆ ಸಭೆ ತೀರ್ಮಾನಿಸಿದ ಸಂದರ್ಭ ಆಕ್ಷೇಪಿಸಿದ ದೇವದಾಸ ಶೆಟ್ಟಿ, ಅದನ್ನು ಯಾರು ಕೆಡಹಿದ್ದಾರೆ ಎಂಬ ತನಿಖೆ ನಡೆಸಬೇಕು ಎಂದರು. ಈ ಸಂದರ್ಭ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ದೇವದಾಸ ಶೆಟ್ಟಿ ಮತ್ತು ಗೋವಿಂದ ಪ್ರಭು ಮಧ್ಯೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.
ಬಸ್ ನಿಲ್ದಾಣದ ಜಾಹೀರಾತು ಫಲಕಗಳು ಅತಿ ಕಡಿಮೆ ದರದಲ್ಲಿ ಕೊಡಲಾಗಿರುವ ವಿಚಾರ, ತ್ಯಾಜ್ಯ ಸಂಗ್ರಹಣೆಯ ಟಿಪ್ಪರ್ ದುರಸ್ತಿಗಳ ಬಿಲ್ ಪಾವತಿ, ಬಿ.ಸಿ.ರೋಡ್ ಪಾರ್ಕ್‌ನ ನಿರ್ವಹಣೆ, ಇಂಟರ್ ಲಾಕ್ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬಂದವು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮೊನೀಶ್ ಆಲಿ, ಸುಗುಣ ಕಿಣಿ, ಬಿ.ಮೋಹನ್, ಬಿ.ಪ್ರವೀಣ್, ಗಂಗಾಧರ್, ಮಹಮ್ಮದ್ ಶರೀಫ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಭಾಸ್ಕರ ಟೈಲರ್, ಜಗದೀಶ ಕುಂದರ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.