ಕೇಂದ್ರ ಸರಕಾರವು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸ್ವಚ್ಛ ಸರ್ವೇಕ್ಷಣ ರಥಯಾತ್ರೆಯ ವಾಹನಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಬುಧವಾರ ಶಾಸಕ ರಾಜೇಶ್ ನಾಯ್ಕ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಈ ಸ್ವಚ್ಛ ಸರ್ವೇಕ್ಷಣ ರಥಯಾತ್ರೆಯು ಬಂಟ್ವಾಳ ತಾಲೂಕಿನ 58 ಗ್ರಾಮ ಪಂಚಾಯತ್‌ಗಳಿಗೆ ಸಂಚರಿಸಲಿದ್ದು, ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದೆ ಎಂದರು.
ಕೇಂದ್ರ ಸರಕಾರವು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿರುವ ಸಾರ್ವಜನಿಕ ಶೌಚಾಲಯ, ಸರಕಾರಿ ಶಾಲೆಗಳು, ಅಂಗನವಾಡಿಗಳು, ಸಂತೆ ನಡೆಯುವ ಸ್ಥಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಸ್ಥಳಗಳು, ಪಂಚಾಯತ್ ಕಚೇರಿ, ಧಾರ್ಮಿಕ ಸ್ಥಳಗಳು, ಮುಖ್ಯ ಬೀದಿಗಳು ಇತ್ಯಾದಿ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವ ಮೂಲಕ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ -೨೦೧೮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ಹೇಳಿದರು. ಈ ಸಂದರ್ಭ ಜಿಪಂ ಸದಸ್ಯ ತುಂಗಪ್ಪ ಬಂಗೇರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಸ್ವಚ್ಛ ಭಾರತ ಮಿಷನ್‌ನ ಜಿಲ್ಲಾ ಸಮಾವೇಶಕ ಸಂಶೀರ್, ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು. ಇಒ ರಾಜಣ್ಣ ನಿರೂಪಿಸಿದರು.