ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಸಲು ಅಯೋಗ್ಯವಾಗಿದೆ. ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರಿಂದ ಈ ಕುರಿತು ದೂರುಗಳು ಸಲ್ಲಿಕೆಯಾದರೂ ಇಲಾಖೆ ನಿರ್ಲಕ್ಷ್ಯ ತಾಳುತ್ತಿದೆ, ಇದಕ್ಕೆ ಎನ್.ಎಚ್.ಎ.ಐ. ಅಧಿಕಾರಿಗಳೇ ನೇರ ಹೊಣೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಹೆದ್ದಾರಿಯ ಸುಂಕ ವಸೂಲಿ ಕೇಂದ್ರದವರೆಗಿನ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ ಹತ್ತಾರು ವರ್ಷಗಳ ಹಿಂದೆ ಬಿ.ಸಿ.ರೋಡ್ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣಗೊಂಡ ಬಳಿಕ ದಿನನಿತ್ಯವೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣ, ಮೇಲ್ಸೇತುವೆ ಮೇಲಿನ ಮಳೆನೀರು ಹರಿದುಹೋಗಲು ಸೂಕ್ತ ಕೊಳವೆಗಳ ವ್ಯವಸ್ಥೆ ಇಲ್ಲದೇ ಇರುವುದು, ಸರ್ವೀಸ್ ರಸ್ತೆಯ ಕಳಪೆ ಕಾಮಗಾರಿ, ಅವೈಜ್ಞಾನಿಕ ಚರಂಡಿ ರಚನೆ, ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು, ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು, ಇವುಗಳಿಂದಾಗಿ ವಾಹನ ಸವಾರರಿಗೆ ಸಾರ್ವಜನಿಕರಿಗೆ ದಿನನಿತ್ಯ ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮಗಳಲ್ಲಿ ವರದಿ, ಸಾರ್ವಜನಿಕರಿಂದ ದೂರುಗಳು ಬಂದರೂ ಇಲಾಖೆಯು ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ಆಪಾದಿಸಿರುವ ಶೆಟ್ಟಿ, ಈ ಬಗ್ಗೆ ಕಾರ್ಯನಿರ್ವಹಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯ ಯೋಜನಾ ನಿರ್ದೇಶಕರ ಕರ್ತವ್ಯ ಲೋಪದಿಂದ ಸಾರ್ವಜನಿಕರಿಗೆ ಈ ರೀತಿಯ ತೊಂದರೆ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶೆಟ್ಟಿ ಒತ್ತಾಯಿಸಿದ್ದಾರೆ.