ಮಳೆ ಎಂದರೆ ಸಮೃದ್ಧಿಯ ಸಂಕೇತ. ಜೀವಿಗಳಿಗೆ ಹೊಸ ಚೇತನಾಶಕ್ತಿಯನ್ನು ಕೊಡುವ ಮಳೆ, ನೀರಿಗೆ ಚಲನಶೀಲತೆಯನ್ನು ನೀಡುತ್ತದೆ. ಸಂಸ್ಕೃತದಲ್ಲಿ ವರ್ಷ ಎಂದು, ತುಳುವಿನಲ್ಲಿ ಬರ್ಸ ಎಂದೂ ಕರೆಯಲ್ಪಡುವ ಮಳೆಗೆ ಯಾವುದೇ ರೀತಿಯ ಕಟ್ಟುಪಾಡುಗಳಿಲ್ಲ. ಈ ಬಾರಿ ಸ್ವಲ್ಪ ಜೋರಾಗಿಯೇ ಸುರಿಯುತ್ತಿರುವ ಮಳೆ ಎಲ್ಲರಿಗೂ ಖುಷಿ ನೀಡುತ್ತಿದೆ. ಆದರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ.
ಮಳೆಗಾಲದಲ್ಲಿ ವಾತಾವರಣ ಬದಲಾಗುತ್ತಲೇ ಇರುವುದರಿಂದ ದೇಹದ ಆರೋಗ್ಯ ಸ್ಥಿರವಾಗಿರುವುದಿಲ್ಲ. ನೆಗಡಿ, ಕೆಮ್ಮು ಮತ್ತು ಜ್ವರದ ಸಮಸ್ಯೆಗಳು ಎದುರಾಗಬಹುದು. ಡೆಂಗ್ಯೂ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳು ಕಾಡಬಹುದು. ಅಲರ್ಜಿ, ಅಸ್ತಮಾ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಅರೋಗ್ಯ ಸಮಸ್ಯೆಗಳು ಉಲ್ಬಣಿಸುವ ಸಂಭವವಿರುತ್ತದೆ. ಪಾಚಿ ಕಟ್ಟಿರುವುದರಿಂದ ಜಾರಿ ಬೀಳುವ ಹಾಗೂ ವಾಹನಗಳು ಸ್ಕಿಡ್ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ವಿಷಯುಕ್ತ ಜಂತುಗಳು ಹಾಗೂ ಹಾವುಗಳು ಬೆಚ್ಚನೆಯ ಸ್ಥಳವನ್ನು ಅರಸಿಕೊಂಡು ಮನೆಯ ಯಾವುದಾದರೊಂದು ಮೂಲೆಯಲ್ಲಿ ಸೇರಿಕೊಳ್ಳುತ್ತವೆ. ಅವುಗಳ ಕಡೆಗೆ ಗಮನವಿರಲಿ.
ಮುನ್ನೆಚ್ಚರಿಕಾ ಕ್ರಮವಾಗಿ ಮಳೆಗಾಲದಲ್ಲಿ ಸುತ್ತಮುತ್ತಲಿನ ಪರಿಸರದ ಶುಚಿತ್ವ ಕಾಪಾಡಿಕೊಳ್ಳಬೇಕು. ತೆಂಗಿನಕಾಯಿ ಚಿಪ್ಪು, ಟಯರ್ ಹಾಗೂ ಇತರೆ ವಸ್ತುಗಳಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗುತ್ತವೆ. ಹಾಗಾಗಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಳೆಯಲ್ಲಿ ನೆನೆಯುವುದು ಆ ಕ್ಷಣಕ್ಕೆ ಖುಷಿ ನೀಡಿದರೂ ಮುಂದಕ್ಕೆ ಆರೋಗ್ಯ ಹದಗೆಡಬಹುದು. ಹಾಗಾಗಿ ಒದ್ದೆಯಾಗದೇ ಇದ್ದರೆ ಉತ್ತಮ.
ಬೆಚ್ಚನೆಯ ಉಡುಪು ಧರಿಸಿ, ಆದಷ್ಟು ಕಾಯಿಸಿದ ನೀರು ಹಾಗೂ ಬಿಸಿ ಮಾಡಿದ ಆಹಾರ ಪದಾರ್ಥ ಸೇವಿಸಬೇಕು. ಹೊರಗಿನ ಜಂಕ್ ಫುಡ್ ಅಥವಾ ಜಿಡ್ಡಿನ ಆಹಾರ ಸೇವನೆಯ ಬದಲು ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಉತ್ತಮ. ನಿಧಾನವಾಗಿ ವಾಹನ ಚಲಾಯಿಸಿದರೆ ಅಪಘಾತವಾಗುವ ಅಪಾಯವೂ ಇರುವುದಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಹದಗೆಡುವ ಆರೋಗ್ಯಕ್ಕೆ ಜೋರಾಗಿ ಸುರಿಯುವ ಮಳೆಯನ್ನು ದೂರದೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡರೆ ಸ್ಥಿರ ಆರೋಗ್ಯ ನಮ್ಮದಾಗುತ್ತದೆ.