ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಿಂದೆ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಎಂದು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹೇಳಿದೆ.
ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಸ್ವೀಕರಿಸಿದ ಬಳಿಕ ಕೇವಲ ಘೋಷಣೆಗಷ್ಟೇ ಭ್ರಷ್ಟಾಚಾರ ನಿರ್ಮೂಲನೆ, ಕಪ್ಪು ಹಣ ತರುವ ಆಶ್ವಾಸನೆ, ಸ್ವಚ್ಛ ಭಾರತ, ಲೋಕಪಾಲ ಮಸೂದೆ, ಉದ್ಯೋಗ ಖಾತರಿ ಆಗಿದೆ. ಆದರೆ ವಾಸ್ತವವಾಗಿ ಶ್ರೀಮಂತರವಿಕಾಸ, ರೈತರಿಗೆ ಮೋಸ, ನೋಟ್ ಬ್ಯಾನ್ ನಿಂದ ದುಷ್ಪರಿಣಾಮಗಳಾಗಿವೆ. ವಿದೇಶಿ ನೀತಿಯ ವಿಚಾರದಲ್ಲಿ ಪಾಕಿಸ್ತಾನದೊಂದಿಗೆ ಮೃದು ಧೋರಣೆ ವಹಿಸಲಾಗುತ್ತಿದೆ ಕೇಂದ್ರ ಸರಕಾರ ನಿರೀಕ್ಷೆಗಳನ್ನು ಹುಟ್ಟಿಸಿ ವಿಫಲ ಸರಕಾರ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದು, ಈಗ ಹುಸಿ ಘೋಷಣೆಯೊಂದಿಗೆ ಸುಳ್ಳಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ, ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಹದಗೆಟ್ಟಿದ್ದರೆ, ಸಂಸದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ ಕೆಲಸವಾಗುತ್ತದೆ ಎಂದು ಭಾವಿಸಿದಂತಿದೆ ಎಂದು ಟೀಕಿಸಿದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮಾತನಾಡಿ, ರಮಾನಾಥ ರೈ ಸಚಿವರಾಗಿದ್ದ ಸಂದರ್ಭ ಬಂಟ್ವಾಳ ಪುರಸಭೆ ಅಭೂತಪೂರ್ವ ಅಭಿವೃದ್ಧಿ ಹೊಂದಿದೆ ಎಂದರು. ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ, ರೈತರ ಸಾಲ ಮನ್ನಾಕ್ಕೆ ಮೋದಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಜಗದೀಶ ಕೊಯ್ಲ ಬೇಬಿ ಕುಂದರ್, ಮಾಧವ ಮಾವೆ, ಮಹಮ್ಮದ್ ನಂದಾವರ, ಮಹೇಶ್ ನಾಯಕ್ ಉಪಸ್ಥಿತರಿದ್ದರು.