ಕಲ್ಲಡ್ಕ

ಶ್ರೀರಾಮ ಪದವಿ ಕಾಲೇಜಿನಲ್ಲಿ ಕೆಸರುಗದ್ದೆ ಪಂದ್ಯಾಟ


ಯುವಜನಾಂಗವು ದುರಾದೃಷ್ಟವೆಂಬಂತೆ ಹಳ್ಳಿಯ ಕೃಷಿಯಲ್ಲಿನ ಪ್ರಾಚೀನತೆಯಿಂದ ದೂರ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಮುಂಗಾರಿನ ಜೊತೆಗೆ ಕೆಸರುಗದ್ದೆಯ ಆಟದ ಹಬ್ಬವನ್ನು ವಿದ್ಯಾರ್ಥಿಗಳೆಲ್ಲರೂ ಆನಂದದಿಂದ ಆಚರಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಪ್ರಗತಿಪರ ಕೃಷಿಕ, ಬೋಳಂತೂರು ಮಹಾಬಲ ರೈ ಅಭಿಪ್ರಾಯ ಪಟ್ಟರು.

ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರತಾಪ ಕ್ರೀಡಾ ಸಂಘದ ಉದ್ಘಾಟನೆಯ ಅಂಗವಾಗಿ ಆಯೋಜಿಸಿದ್ದ ’ಕೆಸರುಗದ್ದೆ ಪಂದ್ಯಾಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪರಿಶುದ್ಧವಾದ ಕ್ಷೀರವನ್ನು ಕೃಷಿ ಭೂಮಿಗೆ ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಯುವಜನರಲ್ಲಿ ಕೃಷಿ ಪದ್ಧತಿ ಆಚಾರ-ವಿಚಾರ ತಿಳುವಳಿಕೆಯ ಉದ್ದೇಶ ಇಟ್ಟುಕೊಂಡು ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಕೆಸರು ಗದ್ದೆ ಆಟವನ್ನು ಪ್ರತೀ ವರ್ಷ ನಡೆಸುತ್ತಾ ಬಂದಿದೆ, ಈ ಆಟವು ಕೇವಲ ಮನರಂಜನೆಯಷ್ಟೇ ಅಲ್ಲದೇ ಹಸಿ ಮಣ್ಣು ಚರ್ಮ ಸುಕ್ಕುಗಟ್ಟುವುದು, ಗಾಯಗಳು, ಅಲರ್ಜಿಗಳಿಗೆ ಶಮನಕಾರಿಯಾಗಿದ್ದು ಚರ್ಮದ ಪೋಷಣೆಗೆ ಔಷಧಿಯೂ ಸರಿ ಎಂದು ಹೇಳಿದರು.

ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಜಯರಾಮ ರೈ, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ, ಕ್ರೀಡಾ ಸಂಘದ ನಿರ್ದೇಶಕ ಶಶಿಕುಮಾರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ, ರಗ್ಬಿ, ಹಿಮ್ಮುಖ ಓಟ, ಬಿಂದಿಗೆ ಓಟ, ನಾಲ್ಕು ಕಾಲಿನ ಓಟ, ರಿಲೆ, ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ತುಳುನಾಡಿನ ಪವಿತ್ರತೆಯ ಆಚಾರ-ವಿಚಾರಗಳ ಸೊಬಗನ್ನು ಎತ್ತಿಹಿಡಿಯುತ್ತಾ ಎಲ್ಲಾ ವಿದ್ಯಾರ್ಥಿಗಳೂ, ಶಿಕ್ಷಕರು, ಹಿರಿಯರು ಹಾಗೂ ಸಾರ್ವಜನಿಕರು ಏಕವರ್ಣಿಯರಾಗಿ ಈ ಸಂತಸದ ಕ್ಷಣದಲ್ಲಿ ಭಾಗಿಯಾದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವರದರಾಜ್ ನಿರೂಪಿಸಿ, ಸಂತೋಷ್ ಸ್ವಾಗತಿಸಿ, ಕ್ರೀಡಾಸಂಘದ ಅಧ್ಯಕ್ಷ ಮಂಜುನಾಥ್ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.