ಸೋಮವಾರ ಜುಲೈ 16ರಂದು ಆರಂಭಗೊಂಡು ಜುಲೈ 21ರವರೆಗೆ ಬಿ.ಸಿ.ರೋಡಿನ ಸಾಮರ್ಥ್ಯ ಸೌಧದಲ್ಲಿ ನಡೆದ ಆಧಾರ್ ಅದಾಲತ್ ಗೆ ಬಂಟ್ವಾಳ ತಾಲೂಕಿನ ನಾಗರಿಕರಿಂದ ಉತ್ತಮ ಸ್ಪಂದನ ದೊರಕಿದೆ.
ಒಟ್ಟು ಆರು ದಿನಗಳ ಕಾಲ ನಡೆದ ಅದಾಲತ್ ನಲ್ಲಿ 102 ಮಂದಿ ಹೊಸದಾಗಿ ಆಧಾರ್ ಕಾರ್ಡ್ ಗಾಗಿ ನೋಂದಾವಣಿ ಮಾಡಿಸಿಕೊಂಡರೆ, 502 ಮಂದಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರು. ಆರು ದಿನಗಳಲ್ಲಿ 604 ಮಂದಿ ಇದರ ಸದುಪಯೋಗ ಪಡೆದಂತಾಗಿದೆ.
ಸರಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಬಂಟ್ವಾಳ ತಾಲೂಕು ಆಡಳಿತ ನಡೆಸಿದ ಆಧಾರ್ ಅದಾಲತ್ ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸೋಮವಾರ ಚಾಲನೆ ನೀಡಿದ್ದರು. ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್ ಸೇವೆ ಆರಂಭವಾದರೆ ನೋಂದಣಿಗಾಗಿ ಜನರು ಕಾಯುವ ಪ್ರಮೇಯ ಕಡಿಮೆಯಾಗಬಹುದು ಎಂದು ಈ ಸಂದರ್ಭ ಅವರು ತಿಳಿಸಿದ್ದರು. ಅದೇ ದಿನ ವಿದ್ಯುತ್ ಸಮಸ್ಯೆಯಿಂದ ಆಧಾರ್ ನೋಂದಣಿ ಕಾರ್ಯಕ್ಕೆ ವಿಘ್ನವುಂಟಾದರೂ ಕೂಡಲೇ ಎಚ್ಚೆತ್ತ ಆಡಳಿತ, ಪೂರಕ ವ್ಯವಸ್ಥೆ ಕಲ್ಪಿಸಿತ್ತು.