ಶಿರಾಡಿ ಘಾಟಿ ರಸ್ತೆ ದುರಸ್ತಿಯಲ್ಲಿರುವುದರಿಂದ ಘನ ವಾಹನಗಳ ಸಂಚಾರವನ್ನು ನಿಷೇಸಲಾಗಿದ್ದು, ವಾಹನಗಳು ಮೈಸೂರು ರಸ್ತೆ ಕಡೆಯಿಂದ ಸಂಚರಿಸತಕ್ಕದ್ದು.
ವಿಟ್ಲ ಪೊಲೀಸರು ನೀಡಿರುವ ಈ ಪ್ರಕಟಣೆಯ ಬ್ಯಾನರ್ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ಭಾನುವಾರ ಸಂಜೆಯಿಂದಲೇ ಕಂಡುಬಂದಿದ್ದು, ಅಲ್ಲಿ ನಿಂತಿರುವ ಪೊಲೀಸ್ ಸಿಬ್ಬಂದಿ ಘನ ವಾಹನಗಳಿಗೆ ಮೈಸೂರು ರಸ್ತೆಯಲ್ಲಿ ತೆರಳಲು ಸೂಚನೆ ನೀಡುತ್ತಿರುವುದು ಕಂಡುಬಂತು.
ಶಿರಾಡಿ ಘಾಟಿಯಲ್ಲಿ ಘನ ವಾಹನಗಳಾದ ಲಾರಿ, ಟ್ರಕ್, ಬಸ್ ಇತ್ಯಾದಿಗಳು ಸಂಚರಿಸಲು ಅನಾನುಕೂಲವಾಗಿರುವ ಹಿನ್ನೆಲೆಯಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದು ಸಂಪೂರ್ಣವಾಗುವವರೆಗೂ ಕೇವಲ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಇದರ ಅರಿವಿಲ್ಲದೆ ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಬಾರದು ಎಂಬ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಸಾಗುವ ಲಾರಿ ಬಸ್ಸುಗಳಿಗೆ ಮಾಣಿಯಲ್ಲೇ ಸೂಚನಾ ಫಲಕ ಹಾಕಲಾಗಿದೆ.
ಮಾಣಿ ಮೂಲಕ ಪುತ್ತೂರು ಮಾರ್ಗವಾಗಿ ಸಂಪಾಜೆ ಘಾಟಿಯ ಮೂಲಕ ಹಾಸನ, ಮೈಸೂರು, ಬೆಂಗಳೂರುಗಳಿಗೆ ಸಂಚರಿಸಲು ಅವಕಾಶವನ್ನು ಘನ ವಾಹನಗಳಿಗೆ ಕಲ್ಪಿಸಲಾಗಿದ್ದು, ಈಗಾಗಲೇ ಜನವರಿಯಿಂದಲೇ ಈ ಸೂಚನ ಪಾಲನೆಯಲ್ಲಿದೆ. ಆದರೆ ಜುಲೈ 15ರಂದು ಶಿರಾಡಿ ಘಾಟಿ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಹಿನ್ನೆಲೆಯಲ್ಲಿ ಎಲ್ಲ ವಾಹಗಳೂ ಘಾಟಿಯಲ್ಲಿ ಸಂಚರಿಸಲು ಹೊರಟ ಕಾರಣ, ಯಾವುದೆಲ್ಲ ವಾಹನಗಳಿಗೆ ಸಂಚಾರ ಸಾಧ್ಯ ಎಂಬ ಕುರಿತು ಗೊಂದಲಗಳು ಏರ್ಪಟ್ಟಿದ್ದವು. ಆದರೆ ದ.ಕ.ಜಿಲ್ಲಾಧಿಕಾರಿ ಈ ಕುರಿತು ಪ್ರಕಟಣೆ ಹೊರಡಿಸಿ ಶಿರಾಡಿ ವಾಹನ ಸಂಚಾರಕ್ಕೆ ನಿಯಮಗಳನ್ನು ಹೇರಿದ್ದರು.
– ಹೆಚ್ಚಿನ ಮಾಹಿತಿಗೆ ಇದನ್ನೂ ಓದಿ