ಬಂಟ್ವಾಳ ತಾಲೂಕಿನ ಆಚಾರಿಪಲ್ಕೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ 25ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಳ್ದೋಡಿಯ ಲಿಂಗಮ್ಮ ಮತ್ತು ಮಕ್ಕಳು ನಡೆಸುವ ಕೃಷಿ ಚಟುವಟಿಕೆಯ ಪಾಠವನ್ನು ಒಂದು ದಿನದ ಕಾರ್ಯಾನುಭವ ಪಡೆಯುವ ಮೂಲಕ ಕಲಿತುಕೊಂಡರು.
ಕೃಷಿ ಚಟುವಟಿಕೆ, ಬತ್ತದ ನೇಜಿ ನಾಟಿ ಮಾಡುವ ಕುರಿತು, ಗದ್ದೆಯಲ್ಲಿ ಕೆಲಸ ಮಾಡುವ ಹಿರಿಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಅವರಿಗೆ ಕೃಷ್ಣಪ್ಪ ಅವರು ನೇಜಿ ತೆಗೆಯುವ ವಿಧಾನವನ್ನು ಹೇಳಿಕೊಟ್ಟರು. ನಂತರ ಕೆಸರಲ್ಲಿ ಇಳಿದು, ಕೃಷಿ ಗೀತೆಗಳನ್ನು ಹಾಡಿ, ಸಂಧಿ ಪಾಡ್ದನಗಳಿಗೆ ಉತ್ತರಿಸಿ, ಸಂತಸದಿಂದ ನಾಟಿ ಕಾರ್ಯದಲ್ಲಿ ತೊಡಗಿದರು. ಮಳೆರಾಯನ ಆರ್ಭಟಕ್ಕೆ ಬೆಚ್ಚದೆ ತಲೆಗೆ ಮುಂಡಾಸು, ಮುಟ್ಟಾಳೆ ಧರಿಸಿ, ನಾಟಿ ಕಾರ್ಯದ ಸಂಭ್ರಮ ಅನುಭವಿಸಿದರು.
ಶಾಲಾ ಮುಖ್ಯಗುರು ಮರ್ಸಿನ್ ಮೇ ಪಾಯ್ಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಲಾಕ್ಷಿ, ಸದಸ್ಯರಾದ ಪೂರ್ಣಿಮಾ, ಗೀತಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೋಹನದಾಸ್ ಸಲಹೆ ಸಹಕಾರ ನೀಡಿದರು. ಲಿಂಗಮ್ಮ ಮತ್ತು ಮಕ್ಕಳು ನೀಡಿದ ಲಘು ಉಪಾಹಾರದೊಂದಿಗೆ ಹೊಸ ಅನುಭವಗಳನ್ನು ಪಡೆದ ಮಕ್ಕಳು, ಕೃಷಿ ಪಾಠದ ಕಾರ್ಯಾನುಭವ ಪಡೆದುಕೊಂಡರು.