ಪಠ್ಯೇತರವಾಗಿ ಕಾರ್‍ಯಾಚರಿಸುವ ವಿವಿಧ ಸಂಘಗಳ ಉದ್ಘಾಟನಾ ಕಾರ್‍ಯಕ್ರಮ ಮಂಚಿ-ಕೊಳ್ನಾಡು ಪ್ರೌಢಶಾಲೆಯಲ್ಲಿ ಜರುಗಿತು.
ಕೊಳ್ನಾಡು ಜಿ.ಪಂ ಸದಸ್ಯರಾದ ಎಂ.ಎಸ್. ಮಹಮ್ಮದ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಎಲ್ಲಾ ವಿಚಾರಗಳು ಮೈಗೂಡಬೇಕಾದರೆ ಮಕ್ಕಳಿಗೆ ಆಸಕ್ತಿಯ ವಿಷಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ವಿರಬೇಕು ಅಂತಹ ಸುವರ್ಣಾವಕಾಶವನ್ನು ಶಾಲೆಗಳಲ್ಲಿ ವಿವಿಧ ಸಂಘಗಳು ದೊರಕಿಸಿಕೊಡುವುದರ ಮೂಲಕ ಮಕ್ಕಳು ನಾಳಿನ ಸಮಾಜಕ್ಕೆ ಸಭ್ಯ ಯೋಗ್ಯ ನಾಗರಿಕರನ್ನು ಕೊಡಮಾಡಿದಂತಾಗುತ್ತದೆ ಎಂದರು.
ಇದೇ ಸಂದರ್ಭ, ಶಾಲೆಯಲ್ಲಿ ಸುಮಾರು 22 ವರ್ಷ ಕರ್ತವ್ಯ ಸಲ್ಲಿಸಿ ವಿಜ್ಞಾನ ವಿಷಯ ಪರಿವೀಕ್ಷಕರಾಗಿ ನಿವೃತ್ತಿ ಹೊಂದಿದ ಪುರುಷೋತ್ತಮ ಟಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ ಸಮರ್ಥ ನಾಯಕತ್ವದ ತಹಳದಿ ಅದು ಶಾಲಾ ಹಂತದಿಂದಲೇ ಬಂದಾಗ ಭವಿಷ್ಯದ ದಿನಗಳಲ್ಲಿ ನೈತಿಕತೆಯಿಂದ ಮತ್ತು ಮೌಲ್ಯಯುತವಾದ ಯುವಜನರ ದಂಡು ಈ ನಾಡಿಗೆ ಬಹಳ ಪ್ರಯೋಜನಕಾರಿಯಾದ ಮಾನವ ಸಂಪನ್ಮೂಲವಾಗಲಿದ್ದಾರೆ ಎಂದರು.
ಸರಕಾರದಿಂದ ಕೊಡಮಾಡಲಾದ ಶೂ ಮತ್ತು ಸಾಕ್ಸ್‌ನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ೧೯೯೪ನೇ ಸಾಲಿನ ಹಳೆ ವಿದ್ಯಾರ್ಥಿಗಳ ತಂಡವು ಐದು ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರದಂತೆ ವಿದ್ಯಾರ್ಥಿ ವೇತನವನ್ನು ತಮ್ಮ ಪ್ರೀತಿಯ ಗುರುಗಳಾದ ಪುರುಷೋತ್ತಮ ಟಿ. ಇವರ ಹೆಸರಿನಲ್ಲಿ ವಿತರಿಸಿದರು. ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಪಾಸಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ಹಸ್ತಾಂತರಿಸಲಾಯಿತು ಶಾಲಾ ಮಂತ್ರಿಮಂಡಲ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಸೇವೆಯ ಅಂಶಗಳನ್ನು ಸ್ವೀಕರಿಸಿದರು.
ಕೊಳ್ನಾಡು ಗ್ರಾ.ಪಂ.ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಏರಿಕೆಯೊಂದಿಗೆ ಶಾಲೆಯು ಅಭಿವೃದ್ಧಿ ಕಾಣಲು ಸಾಧ್ಯ ಮೂಲಭೂತ ಸೌಕರ್‍ಯಗಳನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಜತೆ ಉತ್ತಮ ಬದುಕನ್ನು ಪಡೆದು ಕೊಳ್ಳುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಸಾಲೆ ಎಲ್ಲರಿಗೂ ಶುಭ ಹಾರೈಸಿದರು. ಕಾರ್‍ಯಕ್ರಮದಲ್ಲಿ ಅತಿಥಿಗಳಾಗಿ ಕೊಳ್ನಾಡು ಗ್ರಾ.ಪಂ. ಸದಸ್ಯರಾದ ಐರಿನ್ ಡಿ ಸೋಜ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿವಾಕರ ನಾಯಕ್ ಕುಂಟೂರು, ಯದುಕುಮಾರ ಶೆಟ್ಟಿ, ವಿಶ್ವನಾಥ ನಾಯ್ಕ ನಿರ್ಬೈಲು, ಇಸ್ಮಾಯಿಲ್ ಕೋಕಳ, ಶ್ರೀನಿವಾಸ ಆಚಾರ್ ಮಂಚಿ, ಮಂಚಿ ಕುಕ್ಕಾಜೆ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ದೇವದಾಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವಿ ಶ್ರೀರಾಮಮೂರ್ತಿ ಸ್ವಾಗತಿಸಿ, ಇಂಗ್ಲೀಷ್ ಶಿಕ್ಷಕಿ ಗೀತಾ ವಂದಿಸಿದರು. ಕಲಾ ಶಿಕ್ಷಕ ಜಗನ್ನಾಥ ಪುರುಷ ಕಾರ್‍ಯಕ್ರಮ ನಿರ್ವಹಿಸಿದರು.