ಕಲ್ಲಡ್ಕ ಸಮೀಪ ಬಾಳ್ತಿಲ ಗ್ರಾಮದ ಪಳನೀರುಗುಡ್ಡೆ ಎಂಬಲ್ಲಿ ಮನೆ ಇಲ್ಲದೆ ಗುಡಿಸಲಿನಲ್ಲಿ ಇದ್ದ ಬಡ ಕುಟುಂಬಕ್ಕೆ ಕಲ್ಲಡ್ಕ ವಲಯ ವಿಶ್ವ ಹಿಂದು ಪರಿಷತ್ತು, ಬಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ಮನೆ ನಿರ್ಮಿಸಿಕೊಡಲಾಗಿದ್ದು, ಅದರ ಸಮರ್ಪಣಾ ಕಾರ್ಯ ಸೋಮವಾರ ನಡೆಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ನಂದಾದೀಪ ಮತ್ತು ಭಾರತಮಾತೆಯ ಚಿತ್ರವನ್ನು ಮನೆಯೊಡತಿಗೆ ನೀಡುವ ಮೂಲಕ ಶುಭ ಹಾರೈಸಿ ಮನೆ ಹಸ್ತಾಂತರಿಸಿದರು.
ಲಕ್ಷ್ಮೀ ಆಚಾರ್ಯ ಎಂಬವರಿಗೆ ನಿರ್ಮಿಸಕೊಡಲಾದ ಮನೆ ಇದಾಗಿದ್ದು, ಇವರು ಮಗಳ ಜೊತೆ ವಾಸವಾಗಿದ್ದಾರೆ. ಪತಿ, ಮಗ ಮೃತಪಟ್ಟ ಬಳಿಕ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಸುಸಜ್ಜಿತ ಮನೆಯನ್ನು ನಿರ್ಮಿಸುವ ಯೋಚನೆಯನ್ನು ಮಾಡಿದ ಸಂಘಟನೆ, ಸ್ಥಳೀಯವಾಗಿ ಪ್ರಾರಂಭಗೊಂಡು 5ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ನೂತನ ಮನೆಯನ್ನು ಹಸ್ತಾಂತರಿಸುವ ಕಾರ್ಯ ನಡೆಸಿತು.
ಈ ಸಂದರ್ಭ ಮಾತನಾಡಿದ ಡಾ. ಭಟ್, ದೇವಸ್ಥಾನಕ್ಕೆ ಹೋಗಿ ಸುತ್ತುಬಂದು ಹರಿಕೆ ಹಾಕಿ ದೊರಕುವ ಪುಣ್ಯಕಾರ್ಯಕ್ಕಿಂತ ಈ ಕಾರ್ಯಕ್ಕೆ ಹೆಚ್ಚು ಮಹತ್ವವಿದೆ ಎಂದರು.
ವಿಶ್ವಹಿಂದು ಪರಿಷತ್ತು ಪ್ರಖಂಡ ಅಧ್ಯಕ್ಷ ಕ.ಕೃಷ್ಣಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮೋರ್ಚಾ ಅಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ ವಂದಿಸಿದರು. ಈ ಸಂದರ್ಭ ಪ್ರಮುಖರಾದ ಗೋಪಾಲ್ ಎಸ್. ಶಂಭುಗ, ರಾಜೇಂದ್ರ ಎನ್. ಹೊಳ್ಳ, ವಸಂತ ಮಾಧವ, ರಮೇಶ್ ಎನ್, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ ನೆಲ್ಲಿ ಮೊದಲಾದವರು ಉಪಸ್ಥಿತರಿದ್ದರು.