ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇರುವ ಕಾರಣ ಶಿರಾಡಿ ಘಾಟಿಯಲ್ಲಿ ಧಾವಂತದ, ವೇಗದ ಸವಾರಿ ಮಾಡಬೇಡಿ. ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡೇ ಸಂಚರಿಸಿ.
ಹೀಗೊಂದು ಸಂದೇಶ ನೀಡುತ್ತಲೇ ಶಿರಾಡಿ ಘಾಟಿಯ ಕಾಂಕ್ರೀಟ್ ಕಾಮಗಾರಿಯ ರಸ್ತೆಯನ್ನು ಸಚಿವರು, ಸಂಸದರು ಹಾಗೂ ರಾಜಕಾರಣಿಗಳು, ಅಧಿಕಾರಿಗಳಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ದ.ಕ. ಜಿಲ್ಲೆ ಸಹಿತ ಕರಾವಳಿ ಪ್ರದೇಶಗಳನ್ನು ಸಂಪರ್ಕಿಸುವ ಘಾಟಿ ರಸ್ತೆ ಇದು.
ಸಕಲೇಶಪುರ ತಾಲೂಕು ಕೆಂಪುಹೊಳೆ ಜಂಕ್ಷನ್ ನಲ್ಲಿ ಲೋಕಾರ್ಪಣೆ, ಮತ್ತು ಗುಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ, ವಸತಿ ಸಚಿವ ಯು.ಟಿ.ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್ , ದ.ಕ.ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಒಟ್ಟು 26 ಕಿಮೀ ಉದ್ದದ ಶಿರಾಡಿಘಾಟ್ ರಸ್ತೆಯ ಮೊದಲ ಹಂತದ 13 ಕಿಮೀ ಕಾಂಕ್ರೀಟ್ ಕಾಮಗಾರಿ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿತ್ತು ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್, ಒಟ್ಟು 26 ಕಿಮೀ ಉದ್ದರ ಶಿರಾಡಿಘಾಟ್ ರಸ್ತೆ ಪೂರ್ಣವಾಗಿ ಜನ ಬಳಕೆಗೆ ಮುಕ್ತವಾಗಿರುವುದು ಖುಷಿ ತಂದಿದೆ ಅಲ್ಲದೆ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಶೀಘ್ರವೇ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಆದರೆ ಇನ್ನೂ ಶಿರಾಡಿ ಘಾಟಿ ರಸ್ತೆಯಂಚಿನ ತಡೆಗಳ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಆಗಬೇಕಷ್ಟೇ. ಕೆಲದಿನಗಳ ಮಟ್ಟಿಗೆ ಈ ಘಾಟಿಯಲ್ಲಿ ವೇಗದ ಸವಾರಿಯನ್ನು ನಿಯಂತ್ರಿಸುವುದು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.