ಸುಮಾರು ಆರು ತಿಂಗಳ ಗ್ಯಾಪ್ ನಂತರ ಪಶ್ಚಿಮ ಘಟ್ಟದ ವಿಹಂಗಮ ನೋಟಗಳನ್ನು ನೀಡುವ ಶಿರಾಡಿ ಘಾಟಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ. ಭಾನುವಾರ ಮಧ್ಯಾಹ್ನ ನಂತರ ಪ್ರಯಾಣಿಕರು ಸರಾಗವಾಗಿ ಈ ರಸ್ತೆಯಲ್ಲಿ ಸಂಚರಿಸಬಹುದು.
ಚಾರ್ಮಾಡಿ, ಸಂಪಾಜೆ ಘಾಟಿ ಮೂಲಕ ಬೆಂಗಳೂರು ತಲುಪುತ್ತಿದ್ದ ಪ್ರಯಾಣಿಕರು ಇನ್ನು ಈ ಘಾಟಿಯಲ್ಲಿ ಸಂಚರಿಸಲು ಸಾಧ್ಯ. ಮಂಗಳೂರನ್ನು ರಾಜಧಾನಿ ಬೆಂಗಳೂರಿನೊಂದಿಗೆ ಬೆಸೆಯುವ 350 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ಘಟ್ಟವಾದ ಶಿರಾಡಿ ಘಾಟಿ ರಸ್ತೆಯಿದು.
12.38 ಕಿಲೋಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆದಿತ್ತು. ಚಾರ್ಮಾಡಿ, ಸಂಪಾಜೆ ಘಾಟಿಯ ರಸ್ತೆ ಸಂಚಾರಕ್ಕೆ ಮುಕ್ತಿ ಸಿಗಲಿರುವ ಕಾರಣ ದ.ಕ. ಮಾತ್ರವಲ್ಲದೆ ಇಡೀ ರಾಜ್ಯದ ಯಾತ್ರಿಕರು, ಪ್ರವಾಸಿಗರು ಇದರ ಲಾಭ ಪಡೆಯಲಿದ್ದಾರೆ.
ದ.ಕ. ಜಿಲ್ಲೆಯ ಅಡ್ಡಹೊಳೆಯಿಂದ ಹಾಸನ ಜಿಲ್ಲೆಯ ಕೆಂಪುಹೊಳೆಯವರೆಗಿನ 12.38 ಕಿ.ಮೀ. ಉದ್ದದ ಕಾಂಕ್ರೀಟ್ ಕಾಮಗಾರಿ ಕಳೆದ ತಿಂಗಳೇ ಮುಕ್ತಾಯಗೊಂಡಿತ್ತು. ರಸ್ತೆ ಪಕ್ಕದ ಅಂಚುಗಳಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಅದರ ಮಧ್ಯೆ ಮಣ್ಣು ತುಂಬಿಸಿ ಗಟ್ಟಿಗೊಳಿಸುವ ಕೆಲಸ ನಡೆಯುತ್ತಿದೆ. ಶಿರಾಡಿ ಘಾಟಿಯ ದುರ್ಗಮ ಭಾಗದ ರಸ್ತೆ ಅಭಿವೃದ್ಧಿಯನ್ನು 2 ಹಂತಗಳಲ್ಲಿ ಮುಗಿಸಲಾಗಿದೆ. ಮೊದಲ ಹಂತದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಕೆಂಪು ಹೊಳೆಯಿಂದ ಹೆಗ್ಗದ್ದೆಯವರೆಗೆ 13 ಕಿ.ಮೀ. ಕಾಂಕ್ರೀಟೀಕರಣ ಕಾಮಗಾರಿ 3 ವರ್ಷಗಳ ಹಿಂದೆ ನಡೆದಿದ್ದು, 2015ರ ಆಗಸ್ಟ್ ತಿಂಗಳಲ್ಲಿ ಸಂಚಾರಕ್ಕೆ ಮುಕ್ತಗೊಂಡಿತ್ತು. 2ನೇ ಹಂತದ ಕಾಮಗಾರಿ ಸುಮಾರು 74 ಕೋಟಿ ರೂ. ವೆಚ್ಚದಲ್ಲಿ 2018ರ ಜನವರಿಯಲ್ಲಿ ಆರಂಭಗೊಂಡಿತ್ತು. ಇದಕ್ಕಾಗಿ ಜ.20ರಿಂದ ಶಿರಾಡಿ ಘಾಟಿ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಪ್ರಸ್ತುತ ಅಡ್ಡಹೊಳೆಯಿಂದ ಹೆಗ್ಗದ್ದೆಯವರೆಗೆ ಒಟ್ಟು 26 ಕಿ.ಮೀ.ಘಾಟಿ ರಸ್ತೆ ಕಾಂಕ್ರೀಟೀಕರಣ ಮಾಡಿದಂತಾಗಿದೆ.
ಇದೀಗ ಹಲವು ಯಾತ್ರಿಕರು ಘಾಟಿ ರಸ್ತೆ ಸಂಚಾರ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ. ಆದರೆ ನೆನಪಿಡಿ, ಶಿರಾಡಿ ಘಾಟಿಯಷ್ಟೇ ಹೊಳಪಾಗಿದೆ. ಇನ್ನುಳಿದಂತೆ ಮಂಗಳೂರು – ಬಿ.ಸಿ.ರೋಡ್, ಬಿ.ಸಿ.ರೋಡ್ – ಉಪ್ಪಿನಂಗಡಿ, ಉಪ್ಪಿನಂಗಡಿ – ಗುಂಡ್ಯದವರೆಗೆ ರಸ್ತೆಯಲ್ಲಿ ಅದೇ ವೇಗದಲ್ಲಿ ಸಂಚರಿಸಿದರೆ, ಅಪಾಯ ಕಟ್ಟಿಟ್ಟ ಬುತ್ತಿ.