ಜೇನು ಸಂತತಿ ನಾಶವಾದರೆ ಉತ್ಪಾದನೆ ಕಡಿಮೆಯಾಗಿ ಪ್ರಾಕೃತಿಕ ಸಮತೋಲನ ತಪ್ಪಬಹುದು. ಪ್ರಕೃತಿಯಲ್ಲಿ ಜೇನುನೊಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಜ್ಞ ರಾಕೋಡಿ ಈಶ್ವರ ಭಟ್ ಹೇಳಿದರು.
ಕಲ್ಲಡ್ಕ ಶ್ರಿರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜೇನು ಕೃಷಿ ಸಂಘದ ವಿದ್ಯಾರ್ಥಿಗಳಿಗೆ ಜೇನು ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚಲಿಸುವ ಚೌಕಟ್ಟಿನ ಪೆಟ್ಟಿಗೆಯಲ್ಲಿ ಸಾಕುವುದೇ ಜೇನು ಕೃಷಿ. ಜೇನುನೊಣದಲ್ಲಿ ನಾಲ್ಕು ವಿಧಗಳಿವೆ. ತುಡುವೆ ನೊಣವನ್ನು ಮಾತ್ರ ಪೆಟ್ಟಿಗೆಯಲ್ಲಿ ಸಾಕುತ್ತಾರೆ. ಜೇನುನೊಣ ಪಕೃತಿಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತದೆ ಎಂದ ಅವರು, ಜೇನು ಸಾಕಣೆ ಹೇಗೆ ಮಾಡುವುದು, ಯಾವ ಜೇನಿನಿಂದ ಕೃಷಿ ಮಾಡುವುದು, ಅದರಿಂದಾಗುವ ಲಾಭ ಇತ್ಯಾದಿ ವಿಷಯದ ಕುರಿತಾದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿಯಾದ ಶಿವಗಿರಿ ಸತೀಶ್ ಭಟ್ ಹಾಗೂ ಮುಖ್ಯಗುರುಗಳಾದ ರವಿರಾಜ ಕಣಂತೂರು ಉಪಸ್ಥಿತರಿದ್ದರು. ದೇವಿಕಾ ಸ್ವಾಗತಿಸಿ, ರೂಪಕಲಾ ವಂದಿಸಿದರು.