ಬಿ.ಸಿ.ರೋಡಿನ ಬಸ್ ನಿಲ್ದಾಣದ ಹಿಂಬದಿ, ಅಪೂರ್ವ ಜ್ಯುವೆಲರ್‍ಸ್ ಎದುರು ಶಿಸ್ತಿನಲ್ಲಿ ಕಸ ಎಸೆದು ಅಶಿಸ್ತು ಮೆರೆಯುವ ನಾಗರಿಕರ ವರ್ತನೆ ಹಾಗೂ ಕಸ ವಿಲೇವಾರಿ ಕುರಿತು ಲಯನ್ಸ್ ಕ್ಲಬ್ ನಡೆಸಿದ ಅಭಿಯಾನ ಹಾಗೂ ಇಡೀ ಸಮಸ್ಯೆಯ ಬಗ್ಗೆ ಪುರಸಭೆಯ ಗಮನ ಸೆಳೆದ ಮಾಧ್ಯಮ ವರದಿಗೆ ಸ್ಥಳೀಯ ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯರು ಕೃತಜ್ಞತೆ ಹೇಳಿದ್ದಾರೆ. ಕಾರಣ ಈಗ ಮತ್ತೆ ಆ ಜಾಗ ಸ್ವಚ್ಛವಾಗಿದ್ದು, ಕಸ ಎಸೆಯುವವರು ಮತ್ತೊಮ್ಮೆ ಎಸೆಯುವ ಮೊದಲು ಬ್ಯಾನರ್ ನೋಡಬೇಕಾಗುತ್ತದೆ.
ಏನಿದೆ ಬ್ಯಾನರ್‌ನಲ್ಲಿ?
ಪ್ರಜ್ಞಾವಂತ ನಾಗರಿಕರಿಗೆ ಅಭಿನಂದನೆಗಳು. ಈ ಪರಿಸರದಲ್ಲಿ ನಾವು ಆರಂಭಿಸಿದ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಸಹಕರಿಸಿದ ಸಮಸ್ತ ನಾಗರಿಕರಿಗೆ, ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ, ಬಂಟ್ವಾಳ ಪುರಸಭೆಗೆ, ಸ್ಥಳೀಯ ಪುರಸಭಾ ಸದಸ್ಯರಿಗೆ ಮತ್ತು ಮಾಧ್ಯಮ ಮಿತ್ರರಿಗೆ ನಾವು ಆಭಾರಿಯಾಗಿದ್ದೇವೆ. ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಎಂದು ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಸುಧಾಕರ ಆಚಾರ್ಯ ಮತ್ತು ಸ್ವರ್ಣೋದ್ಯಮಿ ಸುನೀಲ್ ನೇತೃತ್ವದಲ್ಲಿ ಬ್ಯಾನರ್ ಹಾಕಿದೆ.
ಬಿ.ಸಿ.ರೋಡಿನ ಬಸ್ಸು ನಿಲ್ದಾಣದಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮೇಲ್ಬಾಗ ಮತ್ತು ಬಸ್ ನಿಲ್ದಾಣದ ಹಿಂಭಾಗ ಪುರಸಭೆಯ ಸ್ವಚ್ಛತಾ ತಂಡ ಬಂದು ಕಸ, ಕಳೆ ಕೊಳಕುಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದೆ.