ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಮನೆಯೊಂದರಲ್ಲಿ ಸರ್ಕಾರದ ಅನುಮತಿ ಇಲ್ಲದೆ ಆಧಾರ್ ಚೀಟಿಗಳ ನೋಂದಣಿ ಕಾರ್ಯ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯದೊಂದಿಗೆ ಪರಿಶೀಲನೆ ನಡೆಸಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ತಂಡ ಆಧಾರ್ ನೋಂದಣಿಗೆ ಉಪಯೋಗವಾಗುವ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭ ಆಧಾರ್ ನೋಂದಣಿ ಕೇಂದ್ರ ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿದ್ದುದು ಕಂಡುಬಂದಿದ್ದು, ಅಲ್ಲಿದ್ದ ಒಂದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಒಂದು ಸ್ಕ್ಯಾನರ್, ಒಂದು ಐಸ್ಕ್ಯಾನ್, ಒಂದು ಬಯೋಮೆಟ್ರಿಕ್ ಸಿಸ್ಟಮ್, ಒಂದು ಡಿಜಿಟಲ್ ಕ್ಯಾಮರಾ , ಒಂದು ಜಿಪಿಎಸ್ ವ್ಯವಸ್ಥೆಯನ್ನು ವಶಪಡಿಸಿಕೊಳ್ಳಲಾಯಿತು.
ಪರಿಶೀಲನೆ ನಡೆಸಿದ ತಂಡದಲ್ಲಿ ಬಂಟ್ವಾಳ ನಗರ ಠಾಣಾಕಾರಿ ಚಂದ್ರಶೇಖರ್, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ತಾಲೂಕು ಕಚೇರಿ ಸಿಬ್ಬಂದಿ ವಿಷುಕುಮಾರ್, ಗ್ರಾಮ ಲೆಕ್ಕಾಕಾರಿ ರಾಜು ಲಮಾಣಿ, ಸಿಬ್ಬಂದಿ ಸದಾಶಿವ ಕೈಕಂಬ, ಸುಂದರ, ಶೀತಲ್ ಭಾಗವಹಿಸಿದ್ದರು.
ಅನುಮತಿ ಇಲ್ಲ, ನಕಲಿ ಕಂಡುಬಂದಿಲ್ಲ – ಎಸ್ಪಿ
ಬಂಟ್ವಾಳ ಕೆಳಗಿನಪೇಟೆಯಲ್ಲಿರುವ ಮನೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಆಧಾರ್ ಕಾರ್ಡ್ ನೋಂದಣಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳ ತಂಡ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾಗಿ ಎಸ್ಪಿ ರವಿಕಾಂತೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಮನೆಯಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಮಾಡುವುದು ಕಂಡುಬಂದಿದ್ದು, ಸ್ಥಳದಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಮಾಡುವ ಬಗ್ಗೆ ತರಬೇತಿ ಪಡೆದಿರುವ ಆಪರೇಟರ್ ಮತ್ತೊಬ್ಬ ಸಹಾಯಕರಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ವಸ್ತುಗಳನ್ನು ಪಡೆದು, ಠಾಣೆಗೆ ಬಂದ ತಹಶೀಲ್ದಾರ್, ಪರವಾನಗಿ ಇಲ್ಲದೆ ಖಾಸಗಿ ಮನೆಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಮಾಡಿರುವ ಕುರಿತು ವರದಿ ನೀಡಿದ್ದಾರೆ.
ಈ ವಿಚಾರದಲ್ಲಿ ಯಾವುದೇ ನಕಲಿ ಆಧಾರ್ ಕಾರ್ಡ್ ಮಾಡಿರುವುದು ಕಂಡುಬಂದಿಲ್ಲ ಎಂದು ತಿಳಿಸಿರುವ ಎಸ್ಪಿ ರವಿಕಾಂತೇಗೌಡ, ಆಧಾರ್ ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ವರದಿ ಯನ್ನು ಸಲ್ಲಿಸಿ ಕ್ರಮ ಕೈಗೊಳ್ಳಲು ಅವಕಾಶವಿರುವ ಹಿಂಬರಹವನ್ನು ಇಲಾಖೆಯಿಂದ ತಹಶೀಲ್ದಾರ್ ಗೆ ನೀಡಿದ್ದಾಗಿ ತಿಳಿಸಿದ್ದಾರೆ.